ಕೊಣಾಜೆ: ಕೊಣಾಜೆ ಠಾಣಾ ವ್ಯಾಪ್ತಿಯ ಕಂಬಳಪದವು ಬಳಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾನೆ.
ನಡುಪದವು ಅಂಬೇಡ್ಕರ್ ಕಾಲನಿಯ ಬೇಬಿ ಅವರ ಪುತ್ರ ಸುಶಾಂತ್ (23) ಮೃತಪಟ್ಟ ಯುವಕನಾಗಿದ್ದಾನೆ.
ಕಳೆದ ಗುರುವಾರ ಕಂಬಳಪದವು ಬಳಿ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸುಶಾಂತ್ ರಸ್ತೆ ಮೇಲೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ.
ಈ ಘಟನೆ ಹಿಟ್ ಅಂಡ್ ರನ್ ಪ್ರಕರಣವಾಗಿದ್ದು, ಲಾರಿ ಚಾಲಕ ಡಿಕ್ಕಿ ಹೊಡೆದು ವಾಹನವನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ. ಘಟನೆಗೆ ಆಕ್ರೋಶಗೊಂಡ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಪೊಲೀಸರು ಲಾರಿಯನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ಮೃತ ಸುಶಾಂತ್ ತಮ್ಮ ಕುಟುಂಬದ ಆಧಾರಸ್ತಂಭವಾಗಿದ್ದು, ಕೆಲ ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದರು. ಒಂದೂವರೆ ವರ್ಷಗಳ ಹಿಂದೆ ವಿವಾಹವಾಗಿದ್ದ ಅವರು ಪತ್ನಿ ಹಾಗೂ ಸಣ್ಣ ಮಗುವನ್ನು ಅಗಲಿದ್ದಾರೆ. ಈ ದುರಂತದಿಂದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.