ಮಂಗಳೂರು (ಅತ್ತಾವರ):
ಅತ್ತಾವರದ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಏಪ್ರಿಲ್ 19ರಿಂದ 23ರವರೆಗೆ ಬ್ರಹ್ಮಕಲಶೋತ್ಸವ ಭಕ್ತಿಭಾವದಿಂದ ನಡೆಯಲಿದ್ದು, ಅದರ ಅಂಗವಾಗಿ ಪ್ರತಿದಿನ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ.
ಉತ್ಸವದ ಅವಧಿಯಲ್ಲಿ ಪ್ರತಿದಿನ ಭಜನಾ ಸಂಕೀರ್ತನೆ ಹಾಗೂ ಧಾರ್ಮಿಕ ಸಭೆಗಳು ನಡೆಯಲಿವೆ. ಏಪ್ರಿಲ್ 20ರಂದು ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ ಅಂಬುರುಹ ಯಕ್ಷಗಾನ ಕೇಂದ್ರ ಮಲೆಮಾರು ಅವರಿಂದ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ.
ಏಪ್ರಿಲ್ 21ರಂದು ಗೋಲ್ಡನ್ ಸ್ಟಾಕಲ್ಸ್ ಅತ್ತಾವರ ತಂಡದಿಂದ ನೃತ್ಯ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಡಾ. ದೇವದಾಸ್ ಕಾಪಿಕಾಡ್ ಅವರ ಸಾರಥ್ಯದಲ್ಲಿ ತುಳು ಹಾಸ್ಯನಾಟಕ ‘ಎನ್ನನೇ ಕಥೆ’ ಪ್ರದರ್ಶನಗೊಳ್ಳಲಿದೆ.
ಏಪ್ರಿಲ್ 22ರಂದು ವಿದ್ವಾನ್ ಶ್ರೀ ರಾಜೇಶ್ ಹೊಸಬೆಟ್ಟು ಅವರ ಶಿಷ್ಯರಿಂದ ವೇಣುವಾದನ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ ಖ್ಯಾತ ಹಿನ್ನೆಲೆ ಗಾಯಕ ರಮೇಶ್‌ಚಂದ್ರ (ಬೆಂಗಳೂರು) ಅವರಿಂದ ಸುಗಮ ಸಂಗೀತ ರಸಮಂಜರಿ ನಡೆಯಲಿದೆ.
ಏಪ್ರಿಲ್ 23ರಂದು ಬ್ರಹ್ಮಕಲಶದ ದಿನ ಮಧ್ಯಾಹ್ನ ಕವಿ-ಕಾವ್ಯ ಗಾಯನ ಧಾರ್ಮಿಕ ಕವಿಗೋಷ್ಠಿ ನಡೆಯಲಿದ್ದು, ಡಾ. ಮಾಲತಿ ಶೆಟ್ಟಿ ಮಾಣೂರು ಅವರ ನೇತೃತ್ವದಲ್ಲಿ ಹಾಗೂ ಪ್ರೊ. ಭಾಸ್ಕರ್ ರೈ ಕುಕ್ಕುವಳ್ಳಿ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಸಂಜೆ ಕೆ. ನಿನಾದ ಅತ್ತಾವರ ಅವರಿಂದ ಭಕ್ತಿಗೀತೆಗಳ ರಸಮಂಜರಿ ನಡೆಯಲಿದ್ದು, ರಾತ್ರಿ ನಾಟ್ಯ ಕಲಾ ರತ್ನ ವಿದ್ವಾನ್ ಸುರೇಶ್ ಅತ್ತಾವರ ಅವರ ನೇತೃತ್ವದಲ್ಲಿ ‘ಮಣಿಕಂಠ ಜನನ’ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ.
ಐದು ದಿನಗಳ ಈ ಉತ್ಸವವು ಭಕ್ತರಿಗಾಗಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಡಗರದ ಮಹೋತ್ಸವವಾಗಿ ರೂಪುಗೊಳ್ಳಲಿದೆ.