ಬಂಟ್ವಾಳ/ಕಾಸರಗೋಡು:
ಮತದಾರರನ್ನು ಚುನಾವಣಾ ಪ್ರಕ್ರಿಯೆಯ ಭಾಗವಾಗಿಸಲು ಹನ್ನೊಂದು ವರ್ಷದ ಬಾಲಕಿ ಸನ್ನಿಧಿ ಕಶೆಕೋಡಿ ವಿಶಿಷ್ಟ ಜಾಗೃತಿ ಮೂಡಿಸುತ್ತಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ.
ಮಂಗಳೂರು ಬಂಟ್ವಾಳ ಮೂಲದ ಸನ್ನಿಧಿ, ಮಂಜೇಶ್ವರ ಹಾಗೂ ಕಾಸರಗೋಡು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಂಚರಿಸಿ ಮತದಾನದ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಐದು ಭಾಷೆಗಳಲ್ಲಿ ಮಾತನಾಡುವ ಸಾಮರ್ಥ್ಯ ಹೊಂದಿರುವ ಈ ಬಾಲಕಿ, ದೆಹಲಿ, ಗೋವಾ, ಕೇರಳ ಹಾಗೂ ಕರ್ನಾಟಕ ರಾಜ್ಯಗಳಲ್ಲಿಯೂ ಇದೇ ರೀತಿಯ ಜಾಗೃತಿ ಕಾರ್ಯ ನಡೆಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಇಂದು ಕಾಸರಗೋಡು ಜಿಲ್ಲಾ ಕಲೆಕ್ಟರ್ ಅವರನ್ನು ಭೇಟಿ ಮಾಡಿದ ಸನ್ನಿಧಿ ಅವರ ಕಾರ್ಯಕ್ಕೆ ಕಲೆಕ್ಟರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಸ್ತುತ ಪೆರಾಜೆ ಮಾಣಿಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸನ್ನಿಧಿ, ಲೋಕೇಶ್ ಗೌಡ ಕಶೆಕೋಡಿ ಹಾಗೂ ಶೀಲಾವತಿ ದಂಪತಿಗಳ ಪುತ್ರಿಯಾಗಿದ್ದಾರೆ.
ಸಣ್ಣ ವಯಸ್ಸಿನಲ್ಲಿಯೇ ಸಾಮಾಜಿಕ ಹೊಣೆಗಾರಿಕೆಯನ್ನು ತೋರಿಸುತ್ತಿರುವ ಸನ್ನಿಧಿ ಕಶೆಕೋಡಿ ಅವರ ಕಾರ್ಯವು ಇತರರಿಗೆ ಮಾದರಿಯಾಗಿದೆ.