ಮಂಗಳೂರು: ಹಿಂದೂ ಸಮಾಜದ ಐಕ್ಯತೆ ಮತ್ತು ಲೋಕಕಲ್ಯಾಣಾರ್ಥವಾಗಿ 6ನೇ ವರ್ಷದ ಕೊರಗಜ್ಜನ ಆದಿಕ್ಷೇತ್ರಕ್ಕೆ ಪಾದಯಾತ್ರೆಯನ್ನು ಏಪ್ರಿಲ್ 12ರಂದು, ಆದಿತ್ಯವಾರ ಬೆಳಗ್ಗೆ 6 ಗಂಟೆಗೆ ಆಯೋಜಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷದ್ ತಿಳಿಸಿದೆ.
ಕದ್ರಿ ಶ್ರೀ ಮಂಜುನಾಥ ಕ್ಷೇತ್ರದಿಂದ ಕುತ್ತಾರ್ ಕೊರಗಜ್ಜನ ಆದಿಕ್ಷೇತ್ರದವರೆಗೆ ಈ ಪಾದಯಾತ್ರೆ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಪಾದಯಾತ್ರೆಯ ಮೂಲಕ ಜನರಲ್ಲಿ ಆಸ್ತಿಕತೆಯನ್ನು ಬೆಳೆಸುವ ಹಾಗೂ ಧಾರ್ಮಿಕ ಚಿಂತನೆಗಳನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಸಾಮೂಹಿಕ ಪ್ರಾರ್ಥನೆ ಮತ್ತು ಭಕ್ತಿಭಾವದ ವಾತಾವರಣದಲ್ಲಿ ನಡೆಯುವ ಈ ಪಾದಯಾತ್ರೆ, ಹಿಂದೂ ಸಮಾಜದ ಏಕತೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಉತ್ತೇಜಿಸುವ ಕಾರ್ಯಕ್ರಮವಾಗಲಿದೆ.