ಡೀಸೆಲ್ ಕೊರತೆ: ಮೀನುಗಾರರಿಂದ ಆಕ್ರೋಶ

ಮೀನುಗಾರಿಕಾ ಧಕ್ಕೆಯಲ್ಲಿ ಕಾರ್ಯಾಚರಿಸುತ್ತಿರುವ ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಪ್ರಾಥಮಿಕ ಮೀನುಗಾರರ ಸಂಘದ ಪೆಟ್ರೋಲ್ ಪಂಪ್‌ನಲ್ಲಿ ಮೀನುಗಾರಿಕಾ ದೋಣಿಗಳಿಗೆ ಸಮರ್ಪಕವಾಗಿ ಡೀಸೆಲ್ ಪೂರೈಕೆಯಾಗದೆ ತೊಂದರೆ ಉಂಟಾಗಿರುವ ಬಗ್ಗೆ ಬೋಟ್ ಮಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೋಕನ್ ವ್ಯವಸ್ಥೆಯಡಿ ನಿಯಮಿತವಾಗಿ ಡೀಸೆಲ್ ಪೂರೈಕೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಾಲ್ ಬೋಟ್ ಮಾಲಕರ ಸಂಘದ ಕೋಶಾಧಿಕಾರಿ ಅಬೂಬಕರ್ ಅಶ್ರಫ್, ಸಂಘದಡಿ ಸುಮಾರು 500 ಮೀನುಗಾರಿಕಾ ದೋಣಿಗಳು ಕಾರ್ಯನಿರ್ವಹಿಸುತ್ತಿವೆ. ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮವಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂಬ ಕಾರಣ ಹೇಳಲಾಗುತ್ತಿದ್ದರೂ, ಧಕ್ಕೆಯ ಇತರ ನಾಲ್ಕು ಪೆಟ್ರೋಲ್ ಪಂಪ್‌ಗಳಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಡೀಸೆಲ್ ಪೂರೈಕೆಯಾಗುತ್ತಿದೆ ಎಂದು ಆರೋಪಿಸಿದರು.

ಟೋಕನ್ ವ್ಯವಸ್ಥೆಯಡಿ ಡೀಸೆಲ್ ಪೂರೈಕೆ ಮಾಡುವುದಾಗಿ ಹೇಳಲಾಗಿದ್ದರೂ, ಕಳೆದ ಎರಡು ವಾರಗಳಿಂದ ಟೋಕನ್ ಪ್ರಕಾರ ಪೂರೈಕೆ ನಡೆಯದೆ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೈಲ ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲವೆಂದು ಸ್ಪಷ್ಟಪಡಿಸಿದ್ದರೂ, ಅಲ್ಪಸಂಖ್ಯಾತ ಮೀನುಗಾರರ ಪಂಪ್‌ನಲ್ಲಿ ಲೀಟರ್‌ಗೆ ರೂ. 8 ಹೆಚ್ಚುವರಿ ದರ ವಸೂಲಿಸಲಾಗುತ್ತಿದೆ ಎಂದು ದೂರಿದರು.

ಮೀನಿನ ಕೊರತೆಯಿಂದಾಗಿ ಆಳ ಸಮುದ್ರ ಮೀನುಗಾರಿಕೆಗೆ ಕೇವಲ ಶೇ.20ರಷ್ಟು ದೋಣಿಗಳು ಮಾತ್ರ ತೆರಳುತ್ತಿವೆ. ಈ ಪರಿಸ್ಥಿತಿಯಲ್ಲಿಯೂ ಡೀಸೆಲ್ ಸಮಸ್ಯೆ ಎದುರಾಗುತ್ತಿರುವುದು ಆತಂಕಕಾರಿ ಎಂದು ಅವರು ಹೇಳಿದರು. ಅಲ್ಪಸಂಖ್ಯಾತ ಪ್ರಾಥಮಿಕ ಮೀನುಗಾರರ ಸಂಘವು ಎಲ್ಲಾ ಬೋಟ್ ಮಾಲಕರಿಗೂ ಸದಸ್ಯತ್ವ ನೀಡಬೇಕು, ಮಹಾಸಭೆ ನಡೆಸಬೇಕು ಹಾಗೂ ಆದಾಯದ ಒಂದು ಭಾಗವನ್ನು ಬಡ ಮೀನುಗಾರರ ಕಲ್ಯಾಣಕ್ಕೆ ಬಳಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತ್ವಯ್ಯಿಬ್ ಅಹ್ಮದ್, ಅಬ್ದುಲ್ ರಹ್ಮಾನ್ ಝಾಹಿರ್, ಫೈಝಲ್ ಅಬ್ದುಲ್ ರಹ್ಮಾನ್, ಅಬ್ದುಲ್ ಗಫೂರ್ ಹಾಗೂ ಮುಹಮ್ಮದ್ ಅಜ್ಮಲ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!