ಮೈಸೂರಿನ ವ್ಯಕ್ತಿಯೊಬ್ಬರನ್ನು ಮಂಗಳೂರಿನ ಮಂಗಳಮುಖಿಯರು ಅಪಹರಣಗೈದ ಪ್ರಕರಣಕ್ಕೆ ಸಂಬಂಧಿಸಿ ಕೂಲಂಕುಷ ತನಿಖೆ: ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆ

ಮಂಗಳೂರು: ಮೈಸೂರಿನ ವ್ಯಕ್ತಿಯೊಬ್ಬರನ್ನು ಮಂಗಳೂರಿನ ಮಂಗಳಮುಖಿಯರು ಅಪಹರಣಗೈದ ಪ್ರಕರಣಕ್ಕೆ ಸಂಬಂಧಿಸಿ ಕೂಲಂಕುಷ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಬೇಕೆಂದು ನವಸಹಜ ಸಮುದಾಯ ಸಂಘಟನೆ ಆಗ್ರಹಿಸಿದೆ.

ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷೆ ನಿಖಿಲಾ, ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾದ ಮೈಸೂರಿನ ವ್ಯಕ್ತಿಯನ್ನು ಮಂಗಳೂರಿನ ಕೆಲವರು ಅಪಹರಿಸಿದ್ದು, ಆತನಿಗೆ ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ಹಾಗೂ ಟ್ರಾನ್ಸ್‌ಜೆಂಡರ್ ಗುರುತಿನ ಚೀಟಿಯನ್ನು ಮಹಿಳಾ ಅಭಿವೃದ್ಧಿ ನಿಗಮಕ್ಕೆ ಸುಳ್ಳು ದಾಖಲೆಗಳನ್ನು ನೀಡಿ ಮಾಡಿಸಿರುವುದು ಗಂಭೀರ ಅಪರಾಧವಾಗಿದೆ ಎಂದು ಆರೋಪಿಸಿದರು. ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರ ಗಮನಕ್ಕೆ ಬಾರದೆ ಈ ಘಟನೆ ನಡೆದಿದೆ ಎಂದು ಅವರು ಸ್ಪಷ್ಟಪಡಿಸಿದರು.

ಇಂತಹ ಘಟನೆಗಳಿಂದ ಹಲವು ವರ್ಷಗಳಿಂದ ವಿವಿಧ ಜಿಲ್ಲೆ ಮತ್ತು ರಾಜ್ಯಗಳಿಂದ ಮಂಗಳೂರಿಗೆ ಬಂದು ಘನತೆಯ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ನೈಜ ಮಂಗಳಮುಖಿಯರಿಗೆ ತೊಂದರೆಯಾಗುತ್ತಿದೆ. ಲಿಂಗತ್ವ ಅಲ್ಪಸಂಖ್ಯಾತರ ಹೆಸರಿನಲ್ಲಿ ನಕಲಿ ಗುರುತಿನ ಚೀಟಿಗಳನ್ನು ಪಡೆದು ಕೆಲವರು ದುರುಪಯೋಗ ಮಾಡುತ್ತಿರುವುದು ಖಂಡನೀಯವಾಗಿದೆ ಎಂದು ಅವರು ಹೇಳಿದರು.
ನಮ್ಮ ಸಂಘಟನೆಯಲ್ಲಿ 106 ಮಂದಿ ಸದಸ್ಯರಿದ್ದು, ಅವರಲ್ಲಿ 49 ಮಂದಿಗೆ ಟ್ರಾನ್ಸ್‌ಜೆಂಡರ್ ಗುರುತಿನ ಚೀಟಿ ನೀಡಲಾಗಿದೆ. ಇತ್ತೀಚಿನ ಘಟನೆಗಳಿಂದ ಈ ಕಾರ್ಡ್ ಪಡೆದವರ ನೈಜತೆಗೂ ಪ್ರಶ್ನೆ ಉದ್ಭವವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ನಕಲಿ ಮಂಗಳಮುಖಿಯರಿಂದ ನೈಜ ಸಮುದಾಯದ ಜೀವನೋಪಾಯಕ್ಕೂ ಧಕ್ಕೆಯಾಗುತ್ತಿದೆ. ಸಮುದಾಯದ ಒಬ್ಬರ ತಪ್ಪಿನಿಂದ ಎಲ್ಲರಿಗೂ ಕೆಟ್ಟ ಹೆಸರು ಬರಬಾರದು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘಟನೆಯ ಸದಸ್ಯರಾದ ಅರುಂಧತಿ, ಪ್ರೇಮಾ, ಖುಷಿ, ವೃಂದಾ ಮತ್ತು ದೀಕ್ಷಿತಾ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!