ಕನಿಷ್ಠ ವೇತನ ಪುನರ್ ವಿಮರ್ಶೆಗೆ ಆಗ್ರಹಿಸಿ ಹಾಗೂ ಕಾರ್ಮಿಕರ ಮೂಲಭೂತ ಹಕ್ಕುಗಳ ಸಂರಕ್ಷಿಸಲು ಒತ್ತಾಯಿಸಿ ನಗರದಲ್ಲಿಂದು ಸಾರ್ವಜನಿಕರ ಮಧ್ಯೆ ಸಹಿ ಸಂಗ್ರಹ ಚಳುವಳಿಯನ್ನು ನಡೆಸಲಾಯಿತು.ಕಾರ್ಮಿಕ ವರ್ಗದ ಆಶಾಕಿರಣವಾದ ಡಾ.ಬಿ ಆರ್ ಅಂಬೇಡ್ಕರ್ ರವರ ಜನ್ಮದಿನಾರಣೆಯ ದಿನದಂದು ಕರ್ನಾಟಕ ರಾಜ್ಯಾದ್ಯಂತ ಸಹಿ ಸಂಗ್ರಹ ಚಳುವಳಿಯನ್ನು ನಡೆಸಬೇಕೆಂಬ CITU ಕರೆಯ ಮೇರೆಗೆ CITU ದ.ಕ.ಜಿಲ್ಲಾ ಸಮಿತಿಯ ನೇತ್ರತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಸಹಿ ಸಂಗ್ರಹ ಚಳುವಳಿಯನ್ನು ಉದ್ಘಾಟಿಸಿದ ದ.ಕ.ಜಿಲ್ಲೆಯ ಕಾರ್ಮಿಕ ಚಳುವಳಿಯ ಹಿರಿಯ ನೇತಾರರಾದ ಜೆ ಬಾಲಕೃಷ್ಣ ಶೆಟ್ಟಿಯವರು ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕರಿಗೆ ನೀಡಬೇಕಾದ ಕನಿಷ್ಠ ವೇತನವನ್ನು 2022ರಲ್ಲೇ ಪುನರ್ ವಿಮರ್ಶೆಗೆ ಒಳಪಡಿಸಬೇಕಾಗಿತ್ತು.ಆದರೆ ಅಂದಿನ ಬಿಜೆಪಿ ರಾಜ್ಯ ಸರಕಾರ ಅವೈಜ್ಞಾನಿಕವಾಗಿ ಹಾಗೂ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಉಲ್ಲಂಘನೆ ಮಾಡಿ ಅತೀ ಕಡಿಮೆ ಮಟ್ಟದ ವೇತನ ಪರಿಷ್ಕರಣೆಯನ್ನು ಮಾಡಿತ್ತು. ಇಂತಹ ಅವೈಜ್ಞಾನಿಕ ವೇತನ ಪರಿಷ್ಕರಣೆಗೆ ಛೀಮಾರಿ ಹಾಕಿದ ಉಚ್ಛ ನ್ಯಾಯಾಲಯವು ಸಂಪೂರ್ಣವಾಗಿ ರದ್ದುಗೊಳಿಸಿತು.ಮಾತ್ರವಲ್ಲದೆ ವೈಜ್ಞಾನಿಕ ರೀತಿಯಲ್ಲಿ ಮಾಡುವಂತೆ ಆದೇಶ ನೀಡಿತು. ಇದರನ್ವಯ 2025ರ ಎಪ್ರಿಲ್ 11ರಂದು ಇಂದಿನ ಸಿದ್ದರಾಮಯ್ಯ ಸರಕಾರ ಕರಡು ಅಧಿಸೂಚನೆಯನ್ನು ಪ್ರಕಟಿಸಿತು.ಆದರೆ ಇದೂ ಕೂಡ ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿದ್ದು,ಕಾರ್ಮಿಕ ವರ್ಗದ ಪರವಾಗಿ ಅಂತಿಮ ಅಧಿಸೂಚನೆಯನ್ನು ಪ್ರಕಟಿಸಬೇಕೆಂದು ಸರ್ವ ಕಾರ್ಮಿಕ ಸಂಘಟನೆಗಳು ಒತ್ತಾಯಿಸಿವೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, ಕೇಂದ್ರದ ನರೇಂದ್ರ ಮೋದಿ ಸರಕಾರವು 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ 4 ಸಂಹಿತೆಗಳನ್ನು ಜಾರಿ ಮಾಡುವ ಮೂಲಕ ಸ್ವಾತಂತ್ರ್ಯ ಪೂರ್ವದಿಂದಲೂ ಹೋರಾಟಗಳಿಂದ ಪಡೆದ ಕಾರ್ಮಿಕರ ಹಲವು ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ. ಕೆಲಸದ ಅವಧಿಯನ್ನು ಹೆಚ್ಚಳ ಮಾಡಿ ಮೇ ದಿನದ ಮಹತ್ವವನ್ನು ನಾಶ ಮಾಡುವುದು ಬಂಡವಾಳಶಾಹಿಗಳ ಹುನ್ನಾರವಾಗಿದೆ.
ಎಂದು ಹೇಳಿದರು
ಕಾರ್ಯಕ್ರಮದಲ್ಲಿ CITU ಜಿಲ್ಲಾ ನಾಯಕರಾದ ರವಿಚಂದ್ರ ಕೊಂಚಾಡಿ,ಶಶಿಧರ್ ಶಕ್ತಿನಗರ, ಸಂತೋಷ್ ಆರ್ ಎಸ್, ಜಯಲಕ್ಷ್ಮಿ ಜಪ್ಪಿನಮೊಗರು, ನೌಷಾದ್,ಮುತ್ತುರಾಜ್,ಶಿವಪ್ಪ, DYFI ಜಿಲ್ಲಾ ನಾಯಕರಾದ ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ಅಸುಂತ ಡಿಸೋಜ, ಯೋಗಿತಾ ಉಳ್ಳಾಲರವರು ಹಾಜರಿದ್ದರು