ಸೇವೆಯ ಪಥಕ್ಕೆ ಹೊಸ ಚೈತನ್ಯ: ವಿಜೃಂಭಣೆಯಿಂದ ಕಂಗೊಳಿಸಿದ ಪದವಿ ಪ್ರಧಾನ ಹಾಗೂ ವಾರ್ಷಿಕೋತ್ಸವ ಸಮಾರಂಭ
ಕುಂಟಿಕಾನದ ಎ.ಜೆ. ಆಡಿಟೋರಿಯಂನಲ್ಲಿ ಏಪ್ರಿಲ್ 13, ಸೋಮವಾರದಂದು ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್‌ನ ಪದವಿ ಪ್ರದಾನ ಹಾಗೂ ವಾರ್ಷಿಕೋತ್ಸವ ಸಮಾರಂಭವು ಅತ್ಯಂತ ಸಂಭ್ರಮದಿಂದ ಜರುಗಿತು. ಭಕ್ತಿಪೂರ್ವಕ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಸಮಾರಂಭಕ್ಕೆ ಉಪ ಪ್ರಾಂಶುಪಾಲರಾದ ಡಾ. ತೆರೇಸಾ ಲಿಯೋನಿಲ್ಡಾ ಮೆಂಡೋನ್ಸಾ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಪ್ರಾಂಶುಪಾಲರಾದ ಡಾ. ಲರಿಸ್ಸಾ ಮಾರ್ಥಾ ಸಾಮ್ಸ್ ಅವರು ಕಾಲೇಜಿನ ಯಶೋಗಾಥೆಯನ್ನೊಳಗೊಂಡ ವಾರ್ಷಿಕ ವರದಿಯನ್ನು ಮಂಡಿಸುವ ಮೂಲಕ ಸಂಸ್ಥೆಯ ಶೈಕ್ಷಣಿಕ ಪ್ರಗತಿಯನ್ನು ಸಭೆಯ ಮುಂದಿಟ್ಟರು.
ಮುಖ್ಯ ಅತಿಥಿ, ಆರ್.ಜಿ.ಯು.ಎಚ್.ಎಸ್ ಸೆನೆಟ್ ಸದಸ್ಯರು ಹಾಗೂ ಬೆಂಗಳೂರಿನ ಲಾಸ್ಯಾ ನರ್ಸಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಮೆಲ್ಬಿನ್ ಮೈಕಲ್ ಅರಕ್ಕಲ್ ಅವರು ಕಾಲೇಜಿನ ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಿ, ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ, ನರ್ಸಿಂಗ್ ವೃತ್ತಿಯ ಪವಿತ್ರತೆ ಹಾಗೂ ಸಮಾಜದ ಬಗ್ಗೆ ಪದವೀಧರರಿಗಿರುವ ಜವಾಬ್ದಾರಿಯನ್ನು ನೆನಪಿಸಿದರು. ಡಾ. ಸಂಧ್ಯಾ ಡಿ’ಅಲ್ಮೇಡಾ ಅವರು ವೃತ್ತಿಧರ್ಮದ ಪ್ರತಿಜ್ಞಾ ವಿಧಿ ಬೋಧಿಸಿದರೆ, ಅಧ್ಯಕ್ಷತೆ ವಹಿಸಿದ್ದ ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್‌ನ ಉಪಾಧ್ಯಕ್ಷರಾದ ಶ್ರೀ ಪ್ರಶಾಂತ್ ಶೆಟ್ಟಿ ಅವರು ಶಿಸ್ತುಬದ್ಧ ಸೇವೆಯ ಮೂಲಕ ಸಂಸ್ಥೆಯ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿ, ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್‌ನ ಡೈರೆಕ್ಟರ್ ಶ್ರೀಮತಿ ಆಶ್ರಿತಾ ಪಿ. ಶೆಟ್ಟಿ ಅವರು ಉಪಸ್ಥಿತರಿದ್ದರು.
ಈ ಸಮಾರಂಭವು 182 ಸಾಧಕರ ಶೈಕ್ಷಣಿಕ ಸಂಭ್ರಮಕ್ಕೆ ಸಾಕ್ಷಿಯಾಯಿತು. 69 ಡಿಪ್ಲೊಮಾ ವಿದ್ಯಾರ್ಥಿಗಳು, 108 ಪದವೀಧರರು ಹಾಗೂ ಇಬ್ಬರು ಸ್ನಾತಕೋತ್ತರ ಪದವೀಧರರು ತಮ್ಮ ಶ್ರಮದ ಫಲವಾಗಿ ಪದವಿಗಳನ್ನು ಸ್ವೀಕರಿಸಿದರು. ವಿಶೇಷವಾಗಿ, ಮೂವರು ಪಿಎಚ್‌ಡಿ ಸಂಶೋಧಕರು ಡಾಕ್ಟರೇಟ್ ಗೌರವಕ್ಕೆ ಪಾತ್ರರಾಗುವ ಮೂಲಕ ಸಂಸ್ಥೆಯ ಶೈಕ್ಷಣಿಕ ಕಿರೀಟಕ್ಕೆ ಹೊಸ ಗರಿಯನ್ನು ಸೇರಿಸಿದರು.
ಪದವೀಧರರ ಪರವಾಗಿ ಕುಮಾರಿ ಆಶ್ಲಿ ವರ್ಗೀಸ್ ತಮ್ಮ ಶೈಕ್ಷಣಿಕ ಪಯಣದ ನೆನಪುಗಳನ್ನು ಮೆಲುಕು ಹಾಕಿದರು. ಡಾ. ತೆರೆಝಾ ಮಥಿಯಾಸ್ ಅವರು ಕೃತಜ್ಞತೆ ಸಲ್ಲಿಸಿದರೆ, ಡಾ. ಪ್ಯಾಟ್ಸಿ ಕ್ಯಾಸ್ಟೆಲಿನೋ, ಕುಮಾರಿ ರೋಸ್ ಮರಿಯನ್ ಮ್ಯಾಥ್ಯೂ ಮತ್ತು ಶ್ರೀ ಮನೀಷ್ ಜೆ. ಕೋಟಿಯನ್ ತಮ್ಮ ನಿರೂಪಣೆಯ ಮೂಲಕ ಸಮಾರಂಭಕ್ಕೆ ಸೊಬಗು ನೀಡಿದರು. ಔಪಚಾರಿಕ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಸೌರಭ ಸಮಾರಂಭದ ಕಳೆ ಹೆಚ್ಚಿಸಿತು