ಎ.16ರಿಂದ ಬನ್ನಂಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಭಂದ ಬ್ರಹ್ಮಕಲಶೋತ್ಸವ ವೈಭವ

ಉಡುಪಿ: ಇತಿಹಾಸ ಪ್ರಸಿದ್ಧ ಬನ್ನಂಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ‘ಅಷ್ಟಭಂದ ಬ್ರಹ್ಮಕಲಶೋತ್ಸವ ವೈಭವ-2026’ ಎ.16ರಿಂದ ಎ.20ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬಿ.ಮಾಧವ ಪೂಜಾರಿ ತಿಳಿಸಿದ್ದಾರೆ.
ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.20ರಂದು ಬೆಳಗ್ಗೆ 9.15ಕ್ಕೆ ಶ್ರೀಮಹಾಲಿಂಗೇಶ್ವರ ದೇವರ ಪರಿಕಲಶ ಅಭಿಷೇಕ, ಬ್ರಹ್ಮಕಲಶಾಭಿಷೇಕ, ಕಲಾನ್ಯಾಸ, ಮಹಾಪೂಜೆ, ಪಲ್ಲಪೂಜೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ ಮತ್ತು ಸಂಜೆ 6ಗಂಟೆಗೆ ಉತ್ಸವ ಬಲಿ, ಮಹಾರಂಗ ಪೂಜೆ, ಭೂತ ಬಲಿ ನಡೆಯಲಿದೆ ಎಂದರು.


ಎ.15ರಂದು ಮಧ್ಯಾಹ್ನ 3ಗಂಟೆಗೆ ಹಸಿರು ಹೊರೆಕಾಣಿಕೆ ಮೆರವಣಿಗೆ ಜೋಡುಕಟ್ಟೆಯಿಂದ ಸರ್ವಿಸ್ ನಿಲ್ದಾಣದ ಮೂಲಕ ಕ್ಷೇತ್ರ ತಲುಪಲಿದೆ. ಎ.16ರಿಂದ ಪ್ರತಿದಿನ ಸಂಜೆ 6.30ಕ್ಕೆ ಧಾರ್ಮಿಕ ಸಭಾಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 16ರಂದು ಶಿವಪ್ರೇರಣ ಸಹಸ್ರ ಕಂಠ ಗಾಯನ ಹಾಗೂ ರಾಘು ಮಾಸ್ಟ್ರು ತುಳು ನಾಟಕ, ಎ.17ರಂದು ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಹಾಗೂ ಶಿವದೂತ ಗುಳಿಗ ನಾಟಕ, 18ರಂದು ಶಿವ ಪ್ರೇರಣಾ ಚಿತ್ರಕಲಾ ಸ್ಪರ್ಧೆ ಹಾಗೂ ಸ್ಯಾಕ್ಸೋಫೋನ್ ವಾದನ, ನೃತ್ಯ ವೈಭವ, 19ರಂದು ಮದರಂಗಿ ಮತ್ತು ರಂಗೋಲಿ ಸ್ಪರ್ಧೆ, ವೀಣಾ ನಾದೋತ್ಸವ, ಜಾನಪದ ವೈಭವ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.


ದೇವಳದ ದಕ್ಷಿಣ ಮತ್ತು ಪೂರ್ವ ಭಾಗದಲ್ಲಿರುವ 36 ಸೆಂಟ್ಸ್ ಭೂಮಿ ಯನ್ನು ಸರ್ವರ ಸಹಕಾರದಿಂದ ಖರೀದಿಸಿ ದೇವರಿಗೆ ಭೂದಾನವಾಗಿ ಸಮರ್ಪಣೆ ಮಾಡಲು ಉದ್ದೇಶಿಸಿದ್ದು, ಚದರಡಿ ಒಂದರ 2000ರೂ.ನಂತೆ ಅಥವಾ ದೇವಳದ ಇರಿಸಿದ 101ರಿಂದ 5000ರ ಒಳಗಿನ ಕೂಪನ್ ಸಂಖ್ಯೆ ಯನ್ನು ಖರೀದಿಸಿ ದಿನಂಪ್ರತಿ ಕಾಣಿಕೆಯನ್ನು ಸಂಗ್ರಹಿಸಿ, ಒಂದು ವರ್ಷದ ಒಳಗಾಗಿ ದೇವಳಕ್ಕೆ ಹಿಂದಿರುಗಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕ ರಮೇಶ್ ಕಾಂಚನ್, ದೇವಸ್ಥಾನದ ಪ್ರಧಾನ ತಂತ್ರಿ ಪಿ.ಶಶಿಕಾಂತ ತಂತ್ರಿ, ಪ್ರಧಾನ ಅರ್ಚಕ ಪಿ.ವಾಸುದೇವ ಉಪಾಧ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರು ಗಳಾದ ದಿನೇಶ್ ಪುತ್ರನ್, ಎಂ.ಪ್ರಭಾಕರ ಶೆಟ್ಟಿ, ಶೇಖರ ಶೆಟ್ಟಿ, ಯು.ಸುದೇಶ್ ಶೇಟ್, ರಾಜೇಶ್ ಬಿ., ವಿದ್ಯಾಲತಾ ಯು.ಶೆಟ್ಟಿ, ಶಮಿತಾ ಎಸ್.ಭಂಡಾರಿ, ರವಿರಾಜ್ ಭಟ್ ಉಪಸ್ಥಿತರಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!