ಸಾಮಾಜಿಕ ಜಾಲತಾಣಗಳಲ್ಲಿ ತನ್ನ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ ಮಂಗಳೂರಿನ ‘ಅನಿ ಕೆಫೆ’ ಮಾಲೀಕಿ ಹಾಗೂ ಮಂಗಳಮುಖಿ ಅನಿ ಮಂಗಳೂರು ಸ್ಪಷ್ಟನೆ ನೀಡಿದ್ದಾರೆ.ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಿಲ್ ಕುಮಾರ್ ಎಂಬಾತ ತಮ್ಮ ಮೇಲೆ ಕಿಡ್ನಾಪ್, ದೌರ್ಜನ್ಯ ಹಾಗೂ ಹಣ ವಸೂಲಿಯ ಆರೋಪಗಳನ್ನು ಮಾಡುತ್ತಿರುವುದು ಸಂಪೂರ್ಣ ಸುಳ್ಳು ಎಂದು ತಿಳಿಸಿದ್ದಾರೆ. ಈ ಪ್ರಕರಣದ ಹಿಂದೆ ಯಾರೋ ಸಂಚು ರೂಪಿಸಿದ್ದು, ಸಮಗ್ರ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಮೈಸೂರಿನ ಸಬರ್ ಬಸ್ ಸ್ಟ್ಯಾಂಡ್‌ನಿಂದ ಕಿಡ್ನಾಪ್ ಮಾಡಲಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ ಅವರು, “ಸಿಸಿಟಿವಿ ಪರಿಶೀಲಿಸಿದರೆ ಸತ್ಯ ಬಹಿರಂಗವಾಗುತ್ತದೆ. ಕಿಡ್ನಾಪ್ ಆಗಿದ್ದರೆ ಆತ ಸ್ವತಃ ದೂರು ನೀಡಬಹುದಿತ್ತು. ಮಂಗಳೂರು-ಮೈಸೂರು ನಡುವೆ ಹಲವು ಬಾರಿ ಸಂಚರಿಸಿದ್ದಾನೆ. ಇದರಿಂದಲೇ ಆರೋಪಗಳ ಅಸತ್ಯತೆ ಸ್ಪಷ್ಟವಾಗುತ್ತದೆ,” ಎಂದು ಹೇಳಿದರು.ಅನಿಲ್ ಕುಮಾರನೇ ರೀಲ್ಸ್ ಮಾಡಲು ಕೇಳಿಕೊಂಡಿದ್ದನೆಂದು ತಿಳಿಸಿದ ಅವರು, “ನಾವು ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್ ಮಾಡಿದ್ದೇವೆ. ನಿಜವಾಗಿಯೂ ಕಿಡ್ನಾಪ್ ಆಗಿದ್ದರೆ ಜನನಿಬಿಡ ಪ್ರದೇಶದಲ್ಲೇ ಆತ ಸಹಾಯ ಕೇಳಬಹುದಿತ್ತಲ್ಲ?” ಎಂದು ಪ್ರಶ್ನಿಸಿದರು.
ಲಿಂಗ ಗುರುತಿನ ಕುರಿತು NALSA judgment ಉಲ್ಲೇಖಿಸಿದ ಅವರು, “ಒಬ್ಬ ವ್ಯಕ್ತಿಗೆ ತನ್ನ ಲಿಂಗ ಗುರುತನ್ನು ತಾನೇ ನಿರ್ಧರಿಸುವ ಹಕ್ಕು ಇದೆ. ಅನಿಲ್ ಕುಮಾರ್ 18 ವರ್ಷ ಮೇಲ್ಪಟ್ಟವನಾಗಿದ್ದು, ಆತ ಮಂಗಳಮುಖಿ ಎಂದು ದಾಖಲೆಗಳನ್ನು ಮಾಡಿಕೊಂಡಿದ್ದಾನೆ. ಆದರೆ ಈಗ ಅದೇ ಕಾನೂನು ಹಾಗೂ ಸಮುದಾಯದ ಹೆಸರನ್ನು ದುರುಪಯೋಗಪಡಿಸಿಕೊಂಡು 3 ಲಕ್ಷ ರೂ. ಬೇಡಿಕೆ ಇಟ್ಟು ಬ್ಲಾಕ್‌ಮೇಲ್ ಮಾಡುತ್ತಿದ್ದಾನೆ,” ಎಂದು ಆರೋಪಿಸಿದರು.
ಲಿಂಗ ಪರಿವರ್ತನೆಗೆ ಸಂಬಂಧಿಸಿದ ನಿಯಮಗಳು, ಕೌನ್ಸೆಲಿಂಗ್ ಮತ್ತು ಕಾನೂನು ಪ್ರಕ್ರಿಯೆಗಳಿರುವುದನ್ನು ವಿವರಿಸಿದ ಅವರು, “ಸಂಬಂಧಿತ ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಂ ಸಂದೇಶಗಳು, ವಾಯ್ಸ್ ನೋಟ್‌ಗಳು ನನ್ನ ಬಳಿ ಸಾಕ್ಷ್ಯವಾಗಿ ಇವೆ,” ಎಂದು ತಿಳಿಸಿದರು.“ಆತನಿಗೆ ಅಪ್ಪ-ಅಮ್ಮ ಇಲ್ಲ ಎಂದು ಹೇಳಿ ನನ್ನ ಬಳಿ ಆಶ್ರಯ ಪಡೆದಿದ್ದ. 5-6 ತಿಂಗಳು ನಮ್ಮಲ್ಲೇ ಇದ್ದ ಬಳಿಕ ಆತ ಸುಳ್ಳು ಹೇಳಿದ್ದಾನೆ ಎಂಬುದು ತಿಳಿದುಬಂದಿದೆ,” ಎಂದು ಹೇಳಿದರು.ಅನಿಲ್ ಕುಮಾರ್ ಮಂಗಳೂರಿಗೆ ಬರುವ ಮೊದಲೇ ಮೈಸೂರಿನಲ್ಲಿ ಮಂಗಳಮುಖಿಯರ ವೇಷದಲ್ಲಿ ಸಂಚರಿಸಿದ್ದಾನೆ ಎಂಬ ಪುರಾವೆಗಳೂ ಇದ್ದವೆಂದು ಅವರು ಹೇಳಿದರು.
ಈ ಸಂಬಂಧ, ಮಂಗಳಮುಖಿ ಸಮುದಾಯದ ಆಧಾರ್ ಮತ್ತು ಟಿಜಿ ಕಾರ್ಡ್ ದುರುಪಯೋಗದ ಕುರಿತು ಅನುಮಾನ ವ್ಯಕ್ತಪಡಿಸಿ ಇದೇ ತಿಂಗಳ 10ರಂದು ಸಂಬಂಧಪಟ್ಟ ಇಲಾಖೆಗೆ ದೂರು ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಆತನ ದಾಖಲೆಗಳನ್ನು ರದ್ದುಪಡಿಸುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು