ಮಂಗಳೂರು:ಉಳ್ಳಾಲ ನಗರ ಪ್ರದೇಶ ಹಾಗೂ ಮಂಗಳೂರು ನಗರದ ಆಯ್ದ ಭಾಗಗಳಲ್ಲಿ ಭೂಗತ (ಅಂಡರ್‌ಗ್ರೌಂಡ್) ಕೇಬಲ್ ಅಳವಡಿಸುವ ಕಾಮಗಾರಿಯನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ತಿಳಿಸಿದ್ದಾರೆ.ನಗರದ ಮೆಸ್ಕಾಂ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೊಕ್ಕೊಟ್ಟು 33 ಕೆವಿ ಉಪಕೇಂದ್ರವನ್ನು 110 ಕೆವಿಗೆ ಅಪ್‌ಗ್ರೇಡ್ ಮಾಡುವ ಕಾರ್ಯ ಟೆಂಡರ್ ಹಂತದಲ್ಲಿದೆ ಎಂದರು.
ಕೊಣಾಜೆ ಉಪಕೇಂದ್ರದಲ್ಲಿ ಹೆಚ್ಚುವರಿ 110/33 ಕೆವಿ, 20 ಎಂವಿಎ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್ ಸ್ಥಾಪನೆಗೆ ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ಹೆಚ್ಚುವರಿ ಭೂಮಿ ಅಗತ್ಯವಿದೆ. ಅಲ್ಲದೆ, ಈಗಿರುವ 110/11 ಕೆವಿ, 10 ಎಂವಿಎ ಟ್ರಾನ್ಸ್‌ಫಾರ್ಮರ್ ಅನ್ನು 20 ಎಂವಿಎಗೆ ವಿಸ್ತರಿಸುವ ಕಾಮಗಾರಿಗೂ ಭೂಮಿ ಅಗತ್ಯವಿದೆ ಎಂದು ತಿಳಿಸಿದರು.ಜೆಪ್ಪು ಉಪಕೇಂದ್ರದಲ್ಲಿ 110/33 ಕೆವಿ, 20 ಎಂವಿಎ ಟ್ರಾನ್ಸ್‌ಫಾರ್ಮರ್ ಅಳವಡಿಕೆಗೆ ಟಿಎಸಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಮನ್ನಗುಡ್ಡ ಉಪವಿಭಾಗದಲ್ಲಿ 67.64 ಕೋಟಿ ರೂ. ಡಿಪಿಆರ್ ವೆಚ್ಚ ಹಾಗೂ 61.04 ಕೋಟಿ ರೂ. ಡಬ್ಲ್ಯುಎ ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು, ಬೆಂಗಳೂರು ಮೂಲದ ಮಹಾವೀರ್ ಎಲೆಕ್ಟ್ರೋ-ಮೆಕ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಕಾವೂರು ಉಪವಿಭಾಗದಲ್ಲಿ 51.54 ಕೋಟಿ ರೂ. ಡಿಪಿಆರ್ ವೆಚ್ಚ ಹಾಗೂ 45.59 ಕೋಟಿ ರೂ. ಡಬ್ಲ್ಯುಎ ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು, ಬಿಲ್ವಾ ಇನ್ಫ್ರಾ ಸಂಸ್ಥೆ ಗುತ್ತಿಗೆ ಪಡೆದಿದೆ ಎಂದರು .
ಎರಡೂ ಯೋಜನೆಗಳು 2026 ಮಾರ್ಚ್ 25ರಿಂದ ಪ್ರಾರಂಭಗೊಂಡಿದ್ದು 24 ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.ಯೋಜನೆಯಡಿ ಮಣ್ಣಗುಡ್ಡ ಪ್ರದೇಶದಲ್ಲಿ 62.83 ಕಿ.ಮೀ ಎಚ್‌ಟಿ ಲೈನ್ ಹಾಗೂ 45.70 ಕಿ.ಮೀ ಎಲ್‌ಟಿ ಲೈನ್, ಕಾವೂರು ಪ್ರದೇಶದಲ್ಲಿ 47.40 ಕಿ.ಮೀ ಎಚ್‌ಟಿ ಲೈನ್ ಹಾಗೂ 48.75 ಕಿ.ಮೀ ಎಲ್‌ಟಿ ಲೈನ್ ಭೂಗತ ಕೇಬಲ್ ವ್ಯವಸ್ಥೆಗೆ ಪರಿವರ್ತಿಸಲಾಗುತ್ತದೆ ಎಂದರು .
ಈ ಕಾಮಗಾರಿಯಿಂದ ಮಳೆ, ಗಾಳಿ, ಮಿಂಚು ಹಾಗೂ ಮರದ ಕೊಂಬೆಗಳಂತಹ ಹವಾಮಾನ ಅಡಚಣೆಗಳಿಂದ ರಕ್ಷಣೆ ದೊರೆತು ನಿರಂತರ ವಿದ್ಯುತ್ ಸರಬರಾಜು ಸಾಧ್ಯವಾಗಲಿದೆ. ವಿದ್ಯುತ್ ವ್ಯತ್ಯಯಗಳ ಪ್ರಮಾಣ ಕಡಿಮೆಯಾಗುವುದರ ಜೊತೆಗೆ, ಹೊರಗೆ ಕಾಣಿಸುವ ತಂತಿಗಳಿಲ್ಲದ ಕಾರಣ ಅಪಘಾತಗಳ ಅಪಾಯವೂ ಇಳಿಕೆಯಾಗಲಿದೆ ಎಂದರು .
ಇದಲ್ಲದೆ, ನಗರ ಸೌಂದರ್ಯ ಹೆಚ್ಚುವುದರೊಂದಿಗೆ ನಿರ್ವಹಣಾ ವೆಚ್ಚ ಕಡಿಮೆಯಾಗುವ ಸಾಧ್ಯತೆಯಿದ್ದು, ಭೂಮಿಯ ಬಳಕೆ ಉತ್ತಮಗೊಳ್ಳಲಿದೆ. ಭವಿಷ್ಯದ ಸ್ಮಾರ್ಟ್ ಗ್ರಿಡ್ ಹಾಗೂ ಸ್ವಯಂಚಾಲಿತ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳುವ ವ್ಯವಸ್ಥೆಯಾಗಿ ಇದು ರೂಪುಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದರು . .
ಪತ್ರಿಕಾಗೋಷ್ಠಿಯಲ್ಲಿ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್ ಹಾಗೂ ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ ಉಪಸ್ಥಿತರಿದ್ದರು.