ಮಂಗಳೂರು ನಗರಾಭಿವೃದ್ಧಿಗೆ ₹165 ಕೋಟಿ: ಏಪ್ರಿಲ್ 18ರಂದು ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ

ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ (MGNVP) ದ್ವಿತೀಯ ಹಂತದಡಿ ರಾಜ್ಯ ಸರ್ಕಾರವು ಮಂಗಳೂರು ಮಹಾನಗರ ಪಾಲಿಕೆಗೆ ₹165 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಏಪ್ರಿಲ್ 18ರಂದು ಶಿಲಾನ್ಯಾಸ ನೆರವೇರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.

ಅವರು ಮನಪಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಬೆಳಗ್ಗೆ 9ಕ್ಕೆ ಮರವೂರು ಸೇತುವೆ ಬಳಿ ₹3 ಕೋಟಿ ವೆಚ್ಚದ ಕಾಮಗಾರಿ, 9.45ಕ್ಕೆ ವೆಲೆನ್ಸಿಯಾ ಚರ್ಚ್ ಬಳಿ ₹1.95 ಕೋಟಿ ಕಾಮಗಾರಿ, 10.30ಕ್ಕೆ ಚಿಲಿಂಬಿಗುಡ್ಡೆ ಬಳಿ ₹2 ಕೋಟಿ ಕಾಮಗಾರಿ ಹಾಗೂ 10.45ಕ್ಕೆ ಉರ್ವಾಸ್ಟೋರ್ ಬಳಿ ಪ್ರಮುಖ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದರು.

ಇದಾದ ಬಳಿಕ ಉರ್ವಾಸ್ಟೋರ್‌ನ ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 11ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ವಿಜಯಪುರ ಹಾಗೂ ತುಮಕೂರು ನಗರಗಳಲ್ಲಿ ಸುಮಾರು ₹2,000 ಕೋಟಿ ವೆಚ್ಚದಲ್ಲಿ MGNVP ಹಂತ-2 ಯೋಜನೆಯನ್ನು 2024-25ರಿಂದ 2026-27ರವರೆಗೆ ಅನುಷ್ಠಾನಗೊಳಿಸಲು ಅನುಮೋದನೆ ನೀಡಿದೆ. ಮಂಗಳೂರಲ್ಲೂ ಈಗಾಗಲೇ ಕೆಲವು ಕಾಮಗಾರಿಗಳು ಆರಂಭಗೊಂಡಿವೆ ಎಂದು ಐವನ್ ವಿವರಿಸಿದರು.

ಮರಕಡದಿಂದ ಮರವೂರು ಸೇತುವೆವರೆಗೆ ಕಾಂಕ್ರಿಟ್ ರಸ್ತೆ, ಯುಟಿಲಿಟಿ ಡಕ್ಟ್ ಹಾಗೂ ಬಾಕ್ಸ್ ಚರಂಡಿ ನಿರ್ಮಾಣಕ್ಕೆ ₹9 ಕೋಟಿ ವೆಚ್ಚ ನಿಗದಿಯಾಗಿದೆ., ಬಿಜೈ ಆನೆಗುಂಡಿಯಿಂದ ಕಾಪಿಕಾಡು 4ನೇ ಅಡ್ಡರಸ್ತೆ, ಫಾದರ್ ಮುಲ್ಲರ್ ಆಸ್ಪತ್ರೆಯಿಂದ ಕೋಟಿ-ಚೆನ್ನಯ್ಯ ಸರ್ಕಲ್, ವೆಲೆನ್ಸಿಯಾ ಸರ್ಕಲ್‌ನಿಂದ ಗೋರಿಗುಡ್ಡೆ ನಾಗನಕಟ್ಟೆ ಹಾಗೂ ಕೆ.ಎಸ್. ರಾವ್ ರಸ್ತೆಯಿಂದ ನ್ಯಾಯಾಲಯ ಸಂಕೀರ್ಣಕ್ಕೆ ಸಂಪರ್ಕಿಸುವ ರಸ್ತೆ ನಿರ್ಮಾಣಕ್ಕೆ ₹9.50 ಕೋಟಿ ಮೀಸಲಾಗಿದೆ ಎಂದರು .

ವಾಟರ್‌ಫ್ರಂಟ್ ಸಂಪರ್ಕಕ್ಕಾಗಿ ಬೋಳಾರ ಸೀ ಫೇಸ್ ರಸ್ತೆ, ಕೆ.ಎನ್. ಬೋರ್ಡ್ ಯಾರ್ಡ್ ರಸ್ತೆ, ಲೋಬೋ ರಿವರ್ ರಸ್ತೆ, ಟಿವಿಎಸ್ ಫ್ಯಾಕ್ಟರಿ ರಸ್ತೆ, ಕೆನರಾ ಫರ್ನಿಚರ್ ವುಡ್ ರಸ್ತೆ ಸೇರಿದಂತೆ 60ನೇ ಬೆಂಗ್ರೆ ವಾರ್ಡ್‌ನ ರಸ್ತೆಗಳ ಕಾಂಕ್ರಿಟೀಕರಣ ಸೇರಿದಂತೆ ಒಟ್ಟು 25 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು .

ಒಟ್ಟು ಯೋಜನೆಯಲ್ಲಿ ಸಾಮಾನ್ಯ ಅನುದಾನದಡಿ ₹124.50 ಕೋಟಿ, ಪರಿಶಿಷ್ಟ ಜಾತಿಗೆ ₹28.50 ಕೋಟಿ ಹಾಗೂ ಪರಿಶಿಷ್ಟ ಪಂಗಡಕ್ಕೆ ₹12 ಕೋಟಿ ಮೀಸಲಾಗಿವೆ ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಖಂಡರಾದ ಶಶಿಧರ ಹೆಗ್ಡೆ, ಅಪ್ಪಿ, ಭಾಸ್ಕರ್, ಡಿ.ಕೆ. ಅಶೋಕ್, ಪ್ರೇಮ್, ಕೇಶವ, ಚೇತನ್, ಇಮ್ರಾನ್, ಸೋನ್ಸ್, ಚಂದ್ರಹಾಸ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!