ಬಂಟ್ವಾಳ: ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಓಂ ಶ್ರೀ ಗೆಳೆಯರ ಬಳಗ (ರಿ.), ನಾಯಿಲ ಪಾಣೆಮಂಗಳೂರು ಇದರ 20 ನೇ ವರ್ಷದ ವಾರ್ಷಿಕ ಸಂಭ್ರಮ ಎ. 18 ರಂದು ಶನಿವಾರ ಸಂಘದ ವಠಾರದಲ್ಲಿ ನಡೆಯಲಿದೆ ಎಂದು ಸಂಘದ ನಿಕಟಪೂರ್ವ ಅಧ್ಯಕ್ಷ ಕಿರಣ್ ಕುಮಾರ್ ಅಟ್ಲೂರು ತಿಳಿಸಿದ್ದಾರೆ.ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕಾರ್ಯಕ್ರಮದ ವಿವರವನ್ನು ನೀಡಿದರು.
ಓಂ ಶ್ರೀ ಗೆಳೆಯರ ಬಳಗ 20 ವರ್ಷಗಳಿಂದ ನಿರಂತರವಾಗಿ ಸಾಮಾಜಿಕವಾಗಿ ಬೇರೆ ಬೇರೆ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು, ಆಸಕ್ತ ಕುಟುಂಬಗಳಿಗೆ ನೆರವು,ಕ್ರೀಡಾ ಕ್ಷೇತ್ರ, ಸಾಂಸ್ಕೃತಿಕ ಕ್ಷೇತ್ರ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಿ ಗೌರವಿಸುವ ಮತ್ತು ಪ್ರೋತ್ಸಾಹ ನೀಡುವ ಕಾರ್ಯವನ್ನು ಸಂಘದ ವತಿಯಿಂದ ಮಾಡುತ್ತಾ ಬಂದಿದ್ದೇವೆ ಎಂದು ಅವರು ತಿಳಿಸಿದರು.
ಆರೋಗ್ಯ ನಿಧಿ ಹಾಗೂ ಆರೋಗ್ಯ ನಿಧಿ ಎರಡು ಸಂಘದ ವಿನೂತನ ಕಾರ್ಯಕ್ರಮವಾಗಿದ್ದು ಅನೇಕ ಬಡಕುಟುಂಬಗಳಿಗೆ ಈ ಮೂಲಕ ನೆರವು ನೀಡುವ ಉತ್ತಮ ಕೆಲಸ ಮಾಡಿದ್ದೇವೆ.ಮುಂದಿನ ದಿನಗಳಲ್ಲಿ ಕೂಡ ಇಂತಹ ಸಾಮಾಜಿಕವಾದ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡುವ ಆಶಯ ನಮ್ಮದಾಗಿದೆ ಎಂದು ತಿಳಿಸಿದರು.
ಎ. 18 ರಂದು ಬೆಳಿಗ್ಗೆ ಗಣಹೋಮ, ಮಧ್ಯಾಹ್ನ 12 ಗಂಟೆಗೆ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ,ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ,ಸಂಜೆ 5.30 ರಿಂದ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ,6.30 ರಿಂದ ಕುಸಲ್ದ ಕುರ್ಲರಿ,7.30 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ,ಮಾಜಿ ಸಚಿವ ಬಿ.ರಮಾನಾಥ ರೈ ಸಹಿತ ಅನೇಕ ರಾಜಕೀಯ ,ಸಾಮಾಜಿಕ ಗಣ್ಯರು ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ಓಂಕಾರ್ ಇವೆಂಟ್ಸ್ ಮತ್ತು ಎಂಟರ್ ಟೈನ್ ಮೆಂಟ್ ಬಳಗದಿಂದ ಓಂ.ಶ್ರೀ ಮ್ಯೂಸಿಕಲ್ ನೈಟ್ ನಡೆಯಲಿದೆ.
ಪ್ರತಿ ವರ್ಷದಂತೆ ವಾರ್ಷಿಕ ಸಂಭ್ರಮದ ಕಾರ್ಯಕ್ರಮದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಲಾಗುತ್ತಿದ್ದು ಈ ಬಾರಿ ಸೇವಾ ಕ್ಷೇತ್ರದಲ್ಲಿ ಅನಿಲ್ ದಾಸ್, ಕಲಾ ಕ್ಷೇತ್ರದಲ್ಲಿ ಮಹಮ್ಮದ್ ಯಾಸೀರ್ ಕಲ್ಲಡ್ಕ, ಸಾಮಾಜಿಕ ಕ್ಷೇತ್ರದಲ್ಲಿ ಜನಾರ್ದನ ಪೂಜಾರಿ ಬೋಳಂಗಡಿ,ಮಾಧ್ಯಮ ಕ್ಷೇತ್ರದಲ್ಲಿ ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ , ನಮ್ಮ ಬಂಟ್ವಾಳ ವಾಹಿನಿಯ ಸಂಪಾದಕ ಪ್ರಶಾಂತ್ ಪುಂಜಾಲಕಟ್ಟೆ ಅವರನ್ನು ಗೌರವಿಸಲಾಗುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ದಿನೇಶ್ ನೆಲ್ಲಿಗುಡ್ಡೆ, ಗೌರವಾಧ್ಯಕ್ಷ ನಾಗೇಶ್ ಕುಲಾಲ್, ಮಹಿಳಾ ಮಂಡಲದ ಅಧ್ಯಕ್ಷೆ ನಳಿನಿ ಶುಭಕರ ಉಪಸ್ಥಿತರಿದ್ದರು.