ನಾರಿ ಶಕ್ತಿ ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ಸೂಚಿಸಿ ಹಾಗೂ ಮಹಿಳೆಯರಿಗೆ ಮತ್ತೆ ಮೀಸಲಾತಿ ಕಲ್ಪಿಸಬೇಕು ಎಂಬ ಆಗ್ರಹದೊಂದಿಗೆ ಮಂಗಳೂರಿನ ಪುರಭವನದ ಎದುರುಗಡೆಯ ಮಿನಿ ವಿಧಾನಸೌಧದ ಮುಂಭಾಗದಲ್ಲಿ ನಾರಿ ಹಕ್ಕು ಹೋರಾಟ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ , ನಾರಿ ಶಕ್ತಿ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರಲು ವಿಶೇಷ ಅಧಿವೇಶನ ನಡೆಸಿ ಎಲ್ಲ ಪಕ್ಷಗಳ ಬೆಂಬಲ ಕೋರಲಾಗಿದ್ದರೂ, ವಿರೋಧ ಪಕ್ಷಗಳ ಸಹಕಾರದ ಕೊರತೆಯಿಂದ ಮಸೂದೆ ಅಂಗೀಕಾರವಾಗಲಿಲ್ಲ ಎಂದರು .
ಮಹಿಳೆಯರ ಸಬಲೀಕರಣದ ಬಗ್ಗೆ ಭಾಷಣಗಳಲ್ಲಿ ಹೇಳಿಕೆ ನೀಡುವವರೇ, ಕಾರ್ಯರೂಪಕ್ಕೆ ತರುವ ಸಂದರ್ಭದಲ್ಲಿ ಬೆಂಬಲ ನೀಡದಿರುವುದು ವಿಷಾದನೀಯ ಎಂದರು. ಮಹಿಳೆಯರು ಸಮಾಜದಲ್ಲಿ ಸಮಾನ ಹಕ್ಕುಗಳನ್ನು ಪಡೆದು ಮುಂದೆ ಬರಬೇಕಾದ ಅಗತ್ಯವಿದ್ದು, ಸುರಕ್ಷಿತ ವಾತಾವರಣ ನಿರ್ಮಾಣ ಕೂಡ ಅತಿ ಮುಖ್ಯ ಎಂದು ಹೇಳಿದರು.
ಮಹಿಳೆಯರಿಗೆ 33 ಶೇಕಡಾ ಮೀಸಲಾತಿ ನೀಡಿದರೆ ರಾಜಕೀಯ ಸಮೀಕರಣ ಬದಲಾಗುತ್ತದೆ ಎಂಬ ಭಯದಿಂದ ವಿರೋಧ ವ್ಯಕ್ತವಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಕೇಂದ್ರದಲ್ಲಿ ಆಡಳಿತದಲ್ಲಿರುವ ಎನ್ಡಿಎ ಪಕ್ಷಗಳ ಬೆಂಬಲ ಇದ್ದರೂ, ವಿರೋಧ ಪಕ್ಷಗಳ ಸಹಕಾರದ ಅಭಾವದಿಂದ ಮಸೂದೆ ಮುಂದೂಡಲ್ಪಟ್ಟಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗುವವರೆಗೆ ಹೋರಾಟ ಮುಂದುವರಿಸುವುದಾಗಿ ಹೇಳಿ, ಮಹಿಳೆಯರ ಹಕ್ಕಿಗಾಗಿ ಒಗ್ಗಟ್ಟಿನ ಹೋರಾಟ ಅಗತ್ಯವಿದೆ ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಡಾ. ಮಂಜುಳಾ ಅನಿಲ್ ರಾವ್ , ಪ್ರಮುಖರಾದ ಸಹನಾ ಕುಂದ್ರರ್, ರೇಖಾ ಸುದೇಶ್ ,ಭಾರತಿ ಪ್ರಭು, ಸಿಂಧು ಎಂ ಸಹಿತ ಮುಂತಾದವರು ಇದ್ದರು .
ಪ್ರತಿಭಟನೆಯಲ್ಲಿ ಹಲವು ಮಹಿಳೆಯರು ಹಾಗೂ ಸಾರ್ವಜನಿಕರು ಭಾಗವಹಿಸಿ ಮಹಿಳಾ ಹಕ್ಕುಗಳ ಪರ ಘೋಷಣೆಗಳನ್ನು ಕೂಗಿದರು.