ಮಂಗಳೂರು: ಸಿನಿಮಾ ಕ್ಷೇತ್ರದಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಪ್ರತಿಭಾವಂತರಿಗೆ ಸಂತಸದ ಸುದ್ದಿ. ರಂಗ ಬಹಿರಂಗ ಸಂಸ್ಥೆಯ ವತಿಯಿಂದ “ಬಹಿರಂಗ ಸಿನಿ ಕೂಟ” ಕಾಸ್ಟಿಂಗ್ ಹೌಸ್ ಮಂಗಳೂರಿನಲ್ಲಿ ಪ್ರಾರಂಭವಾಗಿದೆ.
ಈ ಕಾಸ್ಟಿಂಗ್ ಹೌಸ್‌ನ್ನು ನಂತೂರು ಪದವಿನ ಕೊರಗಜ್ಜ ದೈವಸ್ಥಾನದಲ್ಲಿ ವಿಜೃಂಭಣೆಯಿಂದ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ “ದಸ್ಕತ್” ಸಿನಿಮಾದ ನಿರ್ದೇಶಕರಾದ ಅನೀಶ್ ಪೂಜಾರಿ, ನಟಿ ಶೈಲಶ್ರೀ ಮುಲ್ಕಿ, “ಕಾಂತಾರ” ಖ್ಯಾತಿಯ ನವೀನ್ ಬೋಂದೆಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದರು. ಜೊತೆಗೆ ರಾಜೇಶ್ ವಿಲ್ಮ, ರೋಹನ್, ಖ್ಯಾತ ಸಂಕಲಾಕಾರ ಗಣೇಶ್ ನಿರ್ಚಲ್, ಕಾರ್ತಿಕ್ ರೈ, ಅಶ್ವಥ್ ಮತ್ತು ಕಲಾ ನಿರ್ದೇಶಕ ಮಹೇಶ್ ಎಂಣ್ಮುರ್ ಉಪಸ್ಥಿತರಿದ್ದು ಶುಭಾಶಯ ಕೋರಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಬಹಿರಂಗ ಸಿನಿ ಕೂಟದ ಮೆಹಬೂಬ್ ಮತ್ತು ಸಾಮ್ರಾಟ್ ಶೆಟ್ಟಿ, ಈ ಕಾಸ್ಟಿಂಗ್ ಹೌಸ್ ಪ್ರತಿಭಾವಂತ ಕಲಾವಿದರು ಮತ್ತು ಸಿನಿಮಾ ಕ್ಷೇತ್ರದ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಒದಗಿಸುವ ಉದ್ದೇಶದಿಂದ ಈ ಯೋಜನೆ ಆರಂಭವಾಗಿದ್ದು, ಹೊಸ ಕಲಾವಿದರಿಗೆ ಇದು ಉತ್ತಮ ಅವಕಾಶವಾಗಲಿದೆ.