ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ರಾಷ್ಟ್ರೀಯ ಕಾನೂನು ಹಬ್ಬ ಏಪ್ರಿಲ್ 24ರಿಂದ ಆರಂಭ

ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ 28ನೇ ವರ್ಷದ ರಾಷ್ಟ್ರೀಯ ಕಾನೂನು ಹಬ್ಬವು ಏಪ್ರಿಲ್ 24, 25 ಮತ್ತು 26ರಂದು ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ತಾರಾನಾಥ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 24ರಂದು ಪೂರ್ವಾಹ್ನ 9.30ಕ್ಕೆ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ಕೇರಳದ ಕೊಚ್ಚಿಯ ನ್ಯಾಶನಲ್ ಯುನಿವರ್ಸಿಟಿ ಆಫ್ ಅಡ್ವಾನ್ಸ್‌ಡ್ ಲೀಗಲ್ ಸ್ಟಡೀಸ್‌ನ ಕುಲಪತಿ ಪ್ರೊ. ಡಾ. ಜಿ.ಬಿ. ರೆಡ್ಡಿ ದೀಪ ಪ್ರಜ್ವಲನೆ ಮಾಡುವರು. ಎಸ್‌ಡಿಎಮ್ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಘವೇಂದ್ರ ರಾವ್ ಮುಖ್ಯ ಅತಿಥಿಗಳಾಗಿರುತ್ತಾರೆ ಎಂದು ತಿಳಿಸಿದರು.

ಏಪ್ರಿಲ್ 26ರಂದು ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿ ನ್ಯಾ. ತ್ಯಾಗರಾಜ ಎನ್. ಇನವಳ್ಳಿ ಸಮಾರೋಪ ಭಾಷಣ ಮಾಡುವರು. ಕಾರ್ಯಕ್ರಮದಲ್ಲಿ ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ಅಡ್ವಕೇಟ್ ಜನರಲ್ ಹಾಗೂ ಹಳೆ ವಿದ್ಯಾರ್ಥಿ ಐ. ತಾರಾನಾಥ ಪೂಜಾರಿ, ರಾಷ್ಟ್ರಪತಿ ಪದಕ ವಿಜೇತ ಪೊಲೀಸ್ ಅಧಿಕಾರಿ ಸಿ.ಎ. ಸೈಮನ್, ಕೇರಳ ರಾಜ್ಯ ವಕೀಲರ ಸಂಘದ ಅಧ್ಯಕ್ಷ ಪಿಯುಸ್ ಎ. ಕೊಟ್ಟಂ, ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಸರಕಾರಿ ವಕೀಲ ಮೆಲ್ವಿನ್ ಪ್ರಕಾಶ್ ನೊರೊನ್ಹಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಎಸ್‌ಡಿಎಮ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಸಭಾಧ್ಯಕ್ಷತೆ ವಹಿಸಲಿದ್ದು, ದೇಶದ ವಿವಿಧ ಭಾಗಗಳಿಂದ ಒಟ್ಟು 26 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ ಎಂದು ಹೇಳಿದರು.

ಕಳೆದ 28 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ರಾಷ್ಟ್ರೀಯ ಕಾನೂನು ಹಬ್ಬವು ತನ್ನದೇ ಆದ ವೈಶಿಷ್ಟ್ಯತೆಗಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ತಂಡಗಳಿಗೆ ನೋಂದಾವಣೆಯ ನಂತರವೇ ಸಮಸ್ಯೆಗಳನ್ನು ನೀಡುವ ವಿಶೇಷ ಕ್ರಮ ಅನುಸರಿಸಲಾಗುತ್ತಿದೆ. ಆರಂಭದಲ್ಲಿ ಡ್ಯೂಯಲ್ ಅಡ್ವೊಕಸಿ ಸ್ಪರ್ಧೆಗಳಿಗೆ ಸೀಮಿತವಾಗಿದ್ದ ಈ ಹಬ್ಬದಲ್ಲಿ ಬಳಿಕ ಟ್ರಿಪಲ್ ಅಡ್ವೊಕಸಿ ಹಾಗೂ ಆಲ್-ಇನ್-ಆಲ್ ಅಡ್ವೊಕಸಿ ಮಾದರಿಗಳನ್ನು ಪರಿಚಯಿಸಲಾಗಿದ್ದು, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ, ಜಾಮೀನು ಅರ್ಜಿ ಹಾಗೂ ಶಾಸನ ರಚನೆ ಸ್ಪರ್ಧೆಗಳನ್ನೂ ದೇಶದಲ್ಲೇ ಮೊದಲ ಬಾರಿಗೆ ಪರಿಚಯಿಸಲಾಗಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಎಮ್ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಘವೇಂದ್ರ ರಾವ್, ಕಾಲೇಜಿನ ಪ್ರಮುಖರಾದ ಡಾ. ಅಶ್ವಿನಿ ಪಿ ಹಾಗೂ ವಿದ್ಯಾರ್ಥಿಗಳಾದ ವಿಧ್ಯಾ, ಮಹಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!