ಮಂಗಳೂರು: ತಣ್ಣೀರುಬಾವಿ ಬೀಚ್ ಬಳಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ರೌಡಿಶೀಟರ್‌ನನ್ನು ಪಣಂಬೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಕಸಬಾ ಬೆಂಗ್ರೆ ನಿವಾಸಿ ಚಂದು ಹಾರೀಸ್(33) ಬಂಧಿತ ಆರೋಪಿ. ಆರೋಪಿಯಿಂದ ಸುಲಿಗೆ ಮಾಡಿದ ವಸ್ತುಗಳಾದ ಸ್ಮಾರ್ಟ್ ವಾಚ್, ಪವರ್ ಬ್ಯಾಂಕ್ ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ವಶಕ್ಕೆ ಪಡೆಯಲಾಗಿದೆ. ಆರೋಪಿಯ ವಿರುದ್ಧ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಈತನ ವಿರುದ್ಧ ಪಣಂಬೂರು ಠಾಣೆಯಲ್ಲಿ ಈಗಾಗಲೇ ರೌಡಿ ಶೀಟ್ ತೆರೆಯಲಾಗಿದೆ.
ಈತನ ವಿರುದ್ಧ ನ್ಯಾಯಾಲಯದಲ್ಲಿ ಹಳೆಯ ಪ್ರಕರಣಗಳಲ್ಲಿ ಮೂರು ವಾರೆಂಟ್‌ಗಳು ಕೂಡ ಜಾರಿಯಾಗಲು ಬಾಕಿ ಇದೆ. ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ತನಿಖೆ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ದರೋಡೆಯು ಏಪ್ರಿಲ್ 13ರ ಮುಂಜಾನೆ ತಣ್ಣೀರುಬಾವಿ ಬೀಚ್ ಸಮೀಪ ಸಂಭವಿಸಿತ್ತು. ದೂರುದಾರರಾದ ಮಡಿಕೇರಿಯ ಸೋಮವಾರಪೇಟೆ ಮೂಲದ ಅಜಯ್ ಕೆ (29) ಅವರು, ತಮ್ಮ ಹುಟ್ಟುಹಬ್ಬವನ್ನು ತಣ್ಣೀರುಬಾವಿ ಬೀಚ್‌ನಲ್ಲಿ ಆಚರಿಸಲು ತನ್ನ ಸ್ನೇಹಿತರಾದ ರಮೇಶ್ ಮತ್ತು ರಫೀಕ್ ಅವರೊಂದಿಗೆ ಕಾರಿನಲ್ಲಿ ಮಂಗಳೂರಿಗೆ ಆಗಮಿಸಿದ್ದರು.
ಏ.13ರ ಬೆಳಗಿನ ಜಾವ 2:30 ಗಂಟೆಯ ಸುಮಾರಿಗೆ ತಣ್ಣೀರುಬಾವಿ ಬೀಚ್ ಸಮೀಪ ಬಂದು ಸ್ವಲ್ಪ ಮುಂದಕ್ಕೆ ದಾರಿ ತಪ್ಪಿ ಕಸಬಾ ಬೆಂಗ್ರೆ ಕಡೆಗೆ ತೆರಳಿದ್ದರು. ಈ ವೇಳೆ ರಸ್ತೆಯ ಬದಿಯಲ್ಲಿ ಇಬ್ಬರು ಯುವಕರು ನಡೆದುಕೊಂಡು ಹೋಗುತ್ತಿರುವುದನ್ನು ಕಂಡು ದೂರುದಾರರು ಕಾರನ್ನು ನಿಲ್ಲಿಸಿ ಅವರಲ್ಲಿ ವಿಳಾಸ ಕೇಳಿದ್ದಾರೆ. ದಾರಿ ತೋರಿಸುವುದಾಗಿ ಹೇಳಿದ ಯುವಕರು ಕಾರಿನ ಹಿಂಬದಿಯಲ್ಲಿ ಕುಳಿತುಕೊಂಡಿದ್ದಾರೆ.
ಸ್ವಲ್ಪ ಮುಂದಕ್ಕೆ ಹೋದ ನಂತರ ಅಜಯ್ ಅವರಿಗೆ ಕಾರನ್ನು ನಿಲ್ಲಿಸುವಂತೆ ಹೇಳಿದ್ದಾರೆ. ಬಳಿಕ ತಮ್ಮ ಬಳಿ ಇದ್ದ ಸ್ಕ್ರೂ ಡ್ರೈವರನ್ನು ತೆಗೆದು ದೂರುದಾರ ಮತ್ತು ಸ್ನೇಹಿತರಿಗೆ ಚುಚ್ಚುವುದಾಗಿ ಬೆದರಿಸಿದ್ದಾರೆ. ಜೊತೆಗೆ ಕಾರಿನ ಮುಂಭಾಗದ ಗ್ಲಾಸನ್ನು ಸ್ಕ್ರೂ ಡ್ರೈವರ ಹಿಡಿಯಿಂದ ಗುದ್ದಿ ಹಾನಿ ಮಾಡಿದ್ದಾರೆ.
ಬಳಿಕ ಆರೋಪಿಗಳು ಟೈಟಾನ್ ವಾಚ್, ಪಾಸ್ಟ್ ಟ್ರಾಕ್ ವಾಚ್, ಕ್ಯಾಮೆರಾಕ್ಕೆ ಅಳವಡಿಸುವ ಗಿಂಬಲ್, ಪವರ್ ಬ್ಯಾಂಕ್, ರೋಲ್ಡ್ ಗೋಲ್ಡ್ ಬ್ರಾಸ್ಲೈಟ್ ಮತ್ತು 2,000 ರೂ. ಹಣ ಸೇರಿದಂತೆ ಸುಮಾರು 24,500 ರೂ ಮೌಲ್ಯದ ಸೊತ್ತುಗಳನ್ನು ಕಿತ್ತುಕೊಂಡಿದ್ದಾರೆ.
ಚಂದು ಹ್ಯಾರಿಸ್ ಎಂಬಾತ ಬೈಕಿನಲ್ಲಿ ಕೃತ್ಯ ನಡೆದ ಸ್ಥಳಕ್ಕೆ ಬಂದು ತನ್ನ ಸ್ನೇಹಿತರಿಂದ ದರೋಡೆ ಮಾಡಿದ ವಸ್ತುಗಳನ್ನು ಪಡೆದು ಇಬ್ಬರು ಆರೋಪಿಗಳನ್ನು ಕರೆದುಕೊಂಡು ಹೋಗಿರುತ್ತಾನೆ. ಕಾರಿನ ಗ್ಲಾಸಿಗೆ ಉಂಟಾದ 8,000 ರೂ. ನಷ್ಟ ಸೇರಿಸಂತೆ ಅಂದಾಜು 32,500 ರೂ. ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.