ನಿಟ್ಟೆ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಮಾಧ್ಯಮ ಸಮಾವೇಶ–2026: ಏಪ್ರಿಲ್ 28–29ರಂದು ಕಾರ್ಯಕ್ರಮ

ನಿಟ್ಟೆ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ (NICO) ವತಿಯಿಂದ ಏಪ್ರಿಲ್ 28 ಮತ್ತು 29ರಂದು ಎರಡು ದಿನಗಳ ಅಂತರರಾಷ್ಟ್ರೀಯ ಮಾಧ್ಯಮ ಸಮಾವೇಶ–2026 ಕಾರ್ಯಕ್ರಮವು ಪನೀರ್ ಕ್ಯಾಂಪಸ್‌ನಲ್ಲಿರುವ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ಡಾ. ಮೌಲ್ಯಾ ಬಾಲಾಡಿ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಏಪ್ರಿಲ್ 29ರಂದು ನಡೆಯಲಿರುವ ಮಾಧ್ಯಮ ಕಾರ್ಯಾಗಾರವನ್ನು ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರಿಗಾಗಿ ವಿಶೇಷವಾಗಿ ಆಯೋಜಿಸಲಾಗಿದೆ ಎಂದರು.

ಡಿಜಿಟಲ್ ಯುಗದ ಸವಾಲುಗಳಾದ ‘ಡೀಪ್ ಫೇಕ್’ ತಂತ್ರಜ್ಞಾನದ ದುರುಪಯೋಗ, ಸುಳ್ಳು ಸುದ್ದಿಗಳು ಹಾಗೂ ತಪ್ಪು ಮಾಹಿತಿಗಳನ್ನು ಗುರುತಿಸುವ ಕುರಿತು ತರಬೇತಿ ನೀಡಲಾಗುವುದು. ಜೊತೆಗೆ ಸಂಘರ್ಷದ ಸಂದರ್ಭಗಳಲ್ಲಿ ವರದಿಗಾರಿಕೆ ಮಾಡುವಾಗ ಪಾಲಿಸಬೇಕಾದ ಮುನ್ನೆಚ್ಚರಿಕೆಗಳು ಮತ್ತು ವೃತ್ತಿಪರತೆ ಕುರಿತೂ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.

‘ಡೇಟಾ ಲೀಡ್ಸ್’ ಅಕಾಡೆಮಿಯ ಸಹಯೋಗದಲ್ಲಿ ನಡೆಯುವ ಕಾರ್ಯಾಗಾರವನ್ನು ಸ್ವತಂತ್ರ ಪತ್ರಕರ್ತ ಎಸ್. ಕುಮಾರ್ ನಡೆಸಿಕೊಡಲಿದ್ದಾರೆ.
‘ಜಾಗತಿಕ ಸಂಘರ್ಷಗಳಲ್ಲಿ ಮಾಧ್ಯಮದ ಜವಾಬ್ದಾರಿಯ ಮರುಚಿಂತನೆ’ ಎಂಬ ವಿಷಯದಡಿ ನಡೆಯಲಿರುವ ಸಮಾವೇಶದಲ್ಲಿ ಉದ್ಯಮದ ಪ್ರಮುಖರು ಹಾಗೂ ಶಿಕ್ಷಣ ತಜ್ಞರು ಭಾಗವಹಿಸಲಿದ್ದಾರೆ. ‘ದಿ ನ್ಯೂಸ್ ಮಿನಿಟ್’ ಡಿಜಿಟಲ್ ಮಾಧ್ಯಮದ ಸಹ-ಸ್ಥಾಪಕಿ ಧನ್ಯಾ ರಾಜೇಂದ್ರನ್ ಸಮಾವೇಶವನ್ನು ಉದ್ಘಾಟಿಸಲಿದ್ದು, ಡಾ. ನಿವಿಲ್ ಮೊರೋ ದಿಕ್ಕೂಚಿ ಭಾಷಣ ಮಾಡಲಿದ್ದಾರೆ ಎಂದರು .

ಈ ಸಂದರ್ಭದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಜೀವಮಾನ ಸಾಧನೆಗಾಗಿ ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರಿಗೆ ‘ಮಾಧ್ಯಮ ಶ್ರೇಷ್ಠತಾ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಸಮಾರೋಪ ಸಮಾರಂಭದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಸಚಿವ ಡಾ. ಸುಮಾ ಬಲ್ಲಾಳ್ ಹಾಗೂ ಮಾಜಿ ರಾಯಿಟರ್ಸ್ ವರದಿಗಾರ ಸ್ಕ್ಯಾನಿ ಕರ್ವಾಲೋ ಭಾಗವಹಿಸಲಿದ್ದಾರೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಸಹ ಪ್ರಾಧ್ಯಾಪಕರಾದ ಡಾ. ಅನಿಶ, ಪ್ರಾಧ್ಯಾಪಕರಾದ ನೇಸರ ಕಾಡನಕುಪ್ಪೆ ಮತ್ತು ಹಿರಿಯ ಪತ್ರಕರ್ತರಾದ ಜಯಂತ್ ಕೋಡ್ಕಾನಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!