ಮಂಗಳೂರು:ಗೋಮಾತೆಗೆ ‘ರಾಷ್ಟ್ರ ಮಾತೆ’ ಗೌರವ ನೀಡಬೇಕು ಹಾಗೂ ದೇಶಾದ್ಯಂತ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಕೇಂದ್ರ ಸರ್ಕಾರ ಕಠಿಣ ಕಾನೂನು ಜಾರಿಗೊಳಿಸಬೇಕು ಎಂಬ ಆಗ್ರಹದೊಂದಿಗೆ ‘ಗೋಮಾತೆಯ ಗೌರವ’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ತಿಳಿಸಿದ್ದಾರೆ.
ಮಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಉದ್ದೇಶದಿಂದ ದೇಶಾದ್ಯಂತ ನಾಲ್ಕು ಹಂತಗಳಲ್ಲಿ ಪ್ರತಿಭಟನೆ ಹಾಗೂ ಜಾಗೃತಿ ಅಭಿಯಾನ ನಡೆಸಲಾಗುವುದು ಎಂದರು .
ಈ ಅಭಿಯಾನದಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲದೆ ಗೋಸೇವೆಯನ್ನೇ ಮುಖ್ಯವಾಗಿ ಪರಿಗಣಿಸಲಾಗಿದ್ದು, ರಾಷ್ಟ್ರ, ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟಗಳಲ್ಲಿ ಪ್ರಚಾರಕರ ಮೂಲಕ ಜನಜಾಗೃತಿ ಮೂಡಿಸಲಾಗುವುದು ಎಂದು ವಿವರಿಸಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಹಿ ಸಂಗ್ರಹ ಅಭಿಯಾನ ಚುರುಕುಗೊಂಡಿದ್ದು, ಉಡುಪಿ, ಕಾಪು, ಕಾರ್ಕಳ, ಹೆಬ್ರಿ, ಕುಂದಾಪುರ, ಬೈಂದೂರು ಹಾಗೂ ಬ್ರಹ್ಮಾವರ ಭಾಗಗಳಲ್ಲಿ ಗಣ್ಯರು ಹಾಗೂ ಗೋಭಕ್ತರು ಸಾರ್ವಜನಿಕರಿಂದ ಸಹಿ ಸಂಗ್ರಹಿಸುತ್ತಿದ್ದಾರೆ. ಸಂಗ್ರಹಿಸಿದ ಮನವಿಗಳನ್ನು ಸಂಬಂಧಿತ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಗೋವು ಕೇವಲ ಪ್ರಾಣಿಯಲ್ಲ, ಅದು ರಾಷ್ಟ್ರೀಯ ಪರಂಪರೆಯ ಭಾಗವಾಗಿದ್ದು, ಗೋಮಾತೆಗೆ ರಾಷ್ಟ್ರ ಮಾತೆ ಸ್ಥಾನಮಾನ ನೀಡಬೇಕು ಹಾಗೂ ಅದನ್ನು ರಾಷ್ಟ್ರೀಯ ದೇವರೆಂದು ಘೋಷಿಸಬೇಕು ಎಂಬುದು ಅಭಿಯಾನದ ಪ್ರಮುಖ ಬೇಡಿಕೆಗಳಲ್ಲೊಂದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಧುಸೂದನ್ ನಾಯಕ್, ಧನರಾಜ್ ಶೆಟ್ಟಿ ಮತ್ತು ಸತೀಶ್ ಉಪಸ್ಥಿತರಿದ್ದರು.