ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮಹಿಳೆಯರಿಗೆ ಶೇ. 33 ಮೀಸಲಾತಿ ಮಸೂದೆಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಮಹಿಳಾ ಮೋರ್ಚಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಸಂಬಂಧ ಬಿ.ವಿ.ಎಸ್ ವೃತ್ತದಿಂದ ಮಹಾನಗರ ಪಾಲಿಕೆ ಕಚೇರಿವರೆಗೆ ಭಾರಿ ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ ಮಹಿಳಾ ಕಾರ್ಯಕರ್ತೆಯರು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿ, ಮಹಿಳಾ ಹಕ್ಕುಗಳ ಪರವಾಗಿ ಧ್ವನಿ ಎತ್ತಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ ಅವರು, “ತೊಟ್ಟಿಲು ತೂಗುವ ಕೈಗಳು ದೇಶವನ್ನೂ ಆಳಬಲ್ಲವು ಎಂಬ ನಂಬಿಕೆಯಿಂದಲೇ ಪ್ರಧಾನಿ ನರೇಂದ್ರ ಮೋದಿ ‘ನಾರಿ ಶಕ್ತಿ ವಂದನಾ ಮಸೂದೆ’ಯನ್ನು ಮಂಡಿಸಿದ್ದಾರೆ. ಆದರೆ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಈ ಮಸೂದೆಗೆ ಅಡ್ಡಿಪಡಿಸುವ ಮೂಲಕ ದೇಶದ ಕೋಟ್ಯಂತರ ಮಹಿಳೆಯರಿಗೆ ಅಪಮಾನ ಎಸಗಿವೆ” ಎಂದು ಆರೋಪಿಸಿದರು.
ಇನ್ನಷ್ಟು ಮಾತನಾಡಿದ ಅವರು, “ಕರ್ನಾಟಕದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಮಹಿಳಾ ಪ್ರತಿನಿಧಿತ್ವವನ್ನು ವಿಸ್ತರಿಸುವ ಅವಕಾಶವಿದ್ದರೂ ಕಾಂಗ್ರೆಸ್ ಅದನ್ನು ತಡೆದು ಮಹಿಳೆಯರನ್ನು ರಾಜಕೀಯವಾಗಿ ಹಿಂದೆ ತಳ್ಳಲು ಪ್ರಯತ್ನಿಸಿದೆ” ಎಂದು ಟೀಕಿಸಿದರು.
ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂರ್ಣಿಮಾ ರಾವ್ ಮಾತನಾಡಿ, “ಡಿಜಿಟಲ್ ಪಾವತಿ, ತ್ರಿವಳಿ ತಲಾಕ್ ನಿಷೇಧ, ಸಮಾನ ನಾಗರಿಕ ಸಂಹಿತೆ ಸೇರಿದಂತೆ ಹಲವು ಸುಧಾರಣೆಗಳಿಗೆ ಕಾಂಗ್ರೆಸ್ ನಿರಂತರವಾಗಿ ಅಡ್ಡಿಪಡಿಸುತ್ತಿದೆ. ಇದೀಗ ಮಹಿಳಾ ಮೀಸಲಾತಿಗೂ ವಿರೋಧ ವ್ಯಕ್ತಪಡಿಸುವ ಮೂಲಕ ತನ್ನ ಮಹಿಳಾ ವಿರೋಧಿ ನಿಲುವನ್ನು ಮತ್ತೆ ತೋರಿಸಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಪಕ್ಷದ ಹಲವು ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.