ಕೆಪಿಟಿ ಡಿಪ್ಲೋಮಾ ಪ್ರವೇಶ ಪ್ರಕ್ರಿಯೆ ಆರಂಭ: ದೇಶದ ಪ್ರಥಮ ಸ್ವಾಯತ್ತ ಸರ್ಕಾರಿ ಪಾಲಿಟೆಕ್ನಿಕ್‌ಗೆ ಅರ್ಜಿ ಆಹ್ವಾನ

ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ 75 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಮಂಗಳೂರಿನ ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್ (KPT) ಸಂಸ್ಥೆ, ದೇಶದ ಪ್ರಥಮ ಸ್ವಾಯತ್ತ ಸರ್ಕಾರಿ ಪಾಲಿಟೆಕ್ನಿಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, 2026-27ನೇ ಸಾಲಿನ ಡಿಪ್ಲೋಮಾ ಇಂಜಿನಿಯರಿಂಗ್ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಹರೀಶ್ ಶೆಟ್ಟಿ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಎಐಸಿಟಿಇ (AICTE) ಮಾನ್ಯತೆ ಪಡೆದಿರುವ ಸಂಸ್ಥೆ ಸ್ವಾಯತ್ತ ಸ್ಥಾನಮಾನ ಹೊಂದಿರುವುದರಿಂದ ಕೈಗಾರಿಕಾ ಅಗತ್ಯಗಳಿಗೆ ಅನುಗುಣವಾಗಿ ಪ್ರತಿ 2-3 ವರ್ಷಗಳಿಗೊಮ್ಮೆ ಪಠ್ಯಕ್ರಮವನ್ನು ನವೀಕರಿಸಲಾಗುತ್ತಿದೆ ಎಂದು ಹೇಳಿದರು. ಇದರ ಮೂಲಕ ವಿದ್ಯಾರ್ಥಿಗಳಿಗೆ ಎಐ, ಐಒಟಿ, 3D ಪ್ರಿಂಟಿಂಗ್, ಪಾಲಿಮರ್ ಟೆಕ್ನಾಲಜಿ ಸೇರಿದಂತೆ ಆಧುನಿಕ ತಂತ್ರಜ್ಞಾನಗಳನ್ನು ಕಲಿಯುವ ಅವಕಾಶ ಸಿಗುತ್ತಿದೆ. ಪರೀಕ್ಷೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯೂ ವೇಗವಾಗಿ ಹಾಗೂ ಪಾರದರ್ಶಕವಾಗಿ ನಡೆಯುತ್ತಿದೆ ಎಂದು ವಿವರಿಸಿದರು.

ಹತ್ತನೇ ತರಗತಿಯ ನಂತರ ನೇರವಾಗಿ 3 ವರ್ಷಗಳ ಡಿಪ್ಲೋಮಾ ಕೋರ್ಸ್‌ಗೆ ಸೇರುವುದರಿಂದ ವಿದ್ಯಾರ್ಥಿಗಳು ಬೇಗ ವೃತ್ತಿ ಜೀವನ ಆರಂಭಿಸಬಹುದು. ಪ್ರತಿವರ್ಷ 60ಕ್ಕೂ ಹೆಚ್ಚು ಕಂಪನಿಗಳು ಕ್ಯಾಂಪಸ್ ಸಂದರ್ಶನಕ್ಕೆ ಆಗಮಿಸುತ್ತಿದ್ದು, ಬಹುತೇಕ ವಿದ್ಯಾರ್ಥಿಗಳು ಉತ್ತಮ ಉದ್ಯೋಗ ಪಡೆಯುತ್ತಿದ್ದಾರೆ. ಡಿಪ್ಲೋಮಾ ಬಳಿಕ ಇಂಜಿನಿಯರಿಂಗ್ ಪದವಿಯ ಎರಡನೇ ವರ್ಷಕ್ಕೆ ನೇರ ಪ್ರವೇಶ ಪಡೆಯುವ ‘ಲ್ಯಾಟರಲ್ ಎಂಟ್ರಿ’ ಸೌಲಭ್ಯವೂ ಲಭ್ಯವಿದೆ ಎಂದು ತಿಳಿಸಿದರು.

ಖಾಸಗಿ ಪಾಲಿಟೆಕ್ನಿಕ್‌ಗಳೊಂದಿಗೆ ಹೋಲಿಸಿದರೆ, ಕೆಪಿಟಿಯಲ್ಲಿ ಅತ್ಯಂತ ಕಡಿಮೆ ಶುಲ್ಕ ವಿಧಿಸಲಾಗುತ್ತಿದೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ವಾರ್ಷಿಕ 4,830 ರೂ., ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ 580 ರೂ. (ಆದಾಯ 2.5 ಲಕ್ಷದೊಳಗೆ) ನಿಗದಿಪಡಿಸಲಾಗಿದೆ. ಪ್ರವರ್ಗ-1 ವಿದ್ಯಾರ್ಥಿಗಳಿಗೆ 1,065 ರೂ. ಹಾಗೂ SNQ ಕೋಟಾದಡಿ 1,580 ರೂ. ಶುಲ್ಕವಿದ್ದು, ಬಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ ಎಂದು ಪ್ರಾಂಶುಪಾಲರು ಹೇಳಿದರು.

ಡಿಪ್ಲೋಮಾ ಪೂರ್ಣಗೊಳಿಸಿದ ನಂತರ DCET ಪರೀಕ್ಷೆಯ ಮೂಲಕ ಇಂಜಿನಿಯರಿಂಗ್ ಪದವಿಯ ಎರಡನೇ ವರ್ಷಕ್ಕೆ ನೇರ ಪ್ರವೇಶ ಪಡೆಯಬಹುದು. ಅಲ್ಲದೆ, ವಿಭಾಗ ಬದಲಾಯಿಸುವ ಅವಕಾಶವೂ ಲಭ್ಯವಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸುತ್ತದೆ ಎಂದು ಹೇಳಿದರು.

ಸಂಸ್ಥೆಯ ಹಳೆ ವಿದ್ಯಾರ್ಥಿಗಳು ಇಂದು ವಿವಿಧ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿ, ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿಗಳಾಗಿ ಹಾಗೂ ಯಶಸ್ವಿ ಉದ್ಯಮಿಗಳಾಗಿ ಗುರುತಿಸಿಕೊಂಡಿರುವುದು ಸಂಸ್ಥೆಯ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿಭಾಗ ಮುಖ್ಯಸ್ಥರಾದ ರವೀಂದ್ರ ಕಿಣಿ , ಸತೀಶ್, ಹರೀಶ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!