‘ನನ್ನ ಜೀವ ಉಳಿದದ್ದೇ ದೊಡ್ಡದು’ : ಕುಕ್ಕರ್ ಬಾಂಬ್ ಸ್ಫೋಟ ಸಂತ್ರಸ್ತನ ಮಾತು

ಮಂಗಳೂರು :ಶಾರೀಕ್ ನಿಗಿಂತ ಹೆಚ್ಚು ಶಿಕ್ಷೆ ಅನುಭವಿಸುತ್ತಿದ್ದೇನೆ ಎಂದು ಆಟೋ ಚಾಲಕ ಪುರು ಷೋತ್ತಮ ಪೂಜಾರಿ ನೋವಿನಿಂದ ನುಡಿದಿದ್ದಾರೆ.”ದುಡಿದು ತಿನ್ನುತ್ತಿದ್ದ ನನ್ನಂತಹ ವ್ಯಕ್ತಿಯನ್ನು ಈ ಸ್ಥಿತಿಗೆ ತಂದಿರುವ ಶಾರೀಕ್‌ಗೆ 10′ ವರ್ಷ ಜೈಲು ಶಿಕ್ಷೆ ಅಲ್ಲ, ಜೀವಾವಧಿ ಶಿಕ್ಷೆ ಆಗಬೇಕಿತ್ತು ಎಂದವರು ಹೇಳುತ್ತಿದ್ದಾರೆ.

ಕಂಕನಾಡಿ ಗರೋಡಿ ಬಳಿ 2022ರ ನ. 19ರಂದು ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ವಿಶೇಷ ನ್ಯಾಯಾಲಯವು ಅಪರಾಧಿ ಮಹಮ್ಮದ್ ಶಾರೀಕ್‌ಗೆ 10 ವರ್ಷ ಕಠಿನ ಶಿಕ್ಷೆ ವಿಧಿಸಿರುವ ಬಗ್ಗೆ ಸಂತ್ರಸ್ತ ಆಟೋ ಚಾಲಕ ಪುರುಷೋತ್ತಮ ಪೂಜಾರಿ ವ್ಯಕ್ತಪಡಿಸಿರುವ ಅಭಿಪ್ರಾಯ ಇದು.

ಮಾದ್ಯಮಗಳ ಜೊತೆ ಮಾತನಾಡಿರುವ ಅವರು, ಆತ ಈಗಾಗಲೇ ಕೆಲವು ವರ್ಷ ಶಿಕ್ಷೆ ಅನುಭವಿಸಿದ್ದು, ಕೆಲವು ವರ್ಷಗಳಲ್ಲಿ ಶಿಕ್ಷೆ ಮುಗಿಸಿ ಹೊರಗೆ ಬರುತ್ತಾನೆ. ಬಳಿಕ ಮತ್ತೆ ಇಂಥದೇ ಕೃತ್ಯದಲ್ಲಿ ತೊಡಗಿಸಿ ಕೊಳ್ಳುವುದಿಲ್ಲ ಎಂದು ಏನು ಖಾತರಿ? ಹಾಗೆ ನೋಡಿದರೆ ಅವನಿಗಿಂತ ಹೆಚ್ಚಿನ ಶಿಕ್ಷೆಯನ್ನು ನಾನು ಅನುಭವಿಸುತ್ತಿದ್ದೇನೆ. ಇನ್ನು ಮುಂದೆ ಇಂತಹ ಕೆಲಸ ಮಾಡಲು ಯಾರೂ ಇಳಿಯಬಾರದು, ಅಷ್ಟು ಕಠಿನ ಶಿಕ್ಷೆಯಾಗಬೇಕಿತ್ತು ಎಂದರು.

ಆತ ಅಪರಾಧಿಯಾಗಿ ಶಿಕ್ಷೆ ಅನುಭವಿಸಿದರೆ ನಾನು ಯಾವುದೇ ತಪ್ಪು ಮಾಡದೆ ಕಳೆದ ಮೂರೂವರೆ ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿದ್ದೇನೆ. 70 ದಿನ ಆಸ್ಪತ್ರೆಯ ಐಸಿಯುನಲ್ಲಿದ್ದೆ. 30 ದಿನ ಬೆಡ್‌ನಲ್ಲಿ ಚಿಕಿತ್ಸೆ ಪಡೆದಿದ್ದೆ. ಆ ದಿನ ನನ್ನ ಜೀವ ಉಳಿದಿರುವುದೇ ದೊಡ್ಡದು ಎಂದರು.

ಶಾಸಕ ವೇದವ್ಯಾಸ ಕಾಮತ್ ಹೊಸ ಆಟೋ ರಿಕ್ಷಾ ಕೊಡಿಸಿದ್ದರು. ಅದನ್ನು ಸ್ವಲ್ಪ ಸಮಯ ಬಾಡಿಗೆಗೆ ಕೊಟ್ಟಿದ್ದೆ. ಆದರೆ ಅದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಈಗ ನಾನೇ ಓಡಿಸುತ್ತೇನೆ. ಸದ್ಯ ಇಡೀ ದಿನ ಆಟೋ ಓಡಿಸಲು ಸಾಧ್ಯವಾಗುವುತ್ತಿಲ್ಲ ಬೆಳಗ್ಗೆ ಮತ್ತು ಸಂಜೆ ಸ್ವಲ್ಪ ಹೊತ್ತು ಆಟೋ ಓಡಿಸುತ್ತೇನೆ ಎಂದರು.

ಸರಕಾರದಿಂದ ಹೆಚ್ಚಿನ ಸಹಕಾರ ಸಿಕ್ಕಿಲ್ಲ. ಹೇಗಿದ್ದೀರಿ ಎಂದು ಕೂಡ ಕೇಳಿಲ್ಲ. ಆಸ್ಪತ್ರೆಯ ಬಿಲ್ 9.50 ಲಕ್ಷ ರೂ. ಮಗಳ ಇಎಸ್‌ಐ ಮೂಲಕ ಪಾವತಿಯಾಗಿದೆ. ಈಗ ಇತರ ಔಷಧ ವೆಚ್ಚಗಳಿಗೆ ತಿಂಗಳಿಗೆ 2,000 ರೂ. ಬೇಕು. ಇಷ್ಟು ವರ್ಷಗಳಿಂದ ಅನುಭವಿಸುತ್ತಿರುವ ನೋವನ್ನು ಸರಕಾರ ಇನ್ನಾದರೂ ಗಮನಿಸಿ ಪರಿಹಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ಹಿರಿಯ ಪುತ್ರಿಯ ಮದುವೆಗೆ ಸಿದ್ಧತೆಯಲ್ಲಿದ್ದ ಪುರುಷೋತ್ತಮ ಪೂಜಾರಿ ಕುಟುಂಬಕ್ಕೆ ಕುಕ್ಕರ್‌ಬಾಂಬ್ ಸ್ಫೋಟ ಪ್ರಕರಣ ದೊಡ್ಡ ಆಘಾತ ನೀಡಿತು. ಬದುಕಿನ ಲಯವನ್ನೇ ತಪ್ಪಿಸಿತು. ಮದುವೆಯ ಖರ್ಚಿಗಾಗಿ ಆಟೋದಲ್ಲಿ ರಾತ್ರಿ ಹಗಲು ದುಡಿಯುತ್ತಿದ್ದ ಅವರು, ಸ್ಫೋಟದಿಂದಾಗಿ ಆಸ್ಪತ್ರೆ ಸೇರಿದರು. ಬಳಿಕ ಎಲ್ಲವೂ ಅನಿಶ್ಚಿತತೆಯಿಂದ ಕೂಡಿತ್ತು. ಕೂಡಿಟ್ಟ ಹಣವೆಲ್ಲ ಖರ್ಚಾಯಿತು. ಆದರೆ ಕುಟುಂಬಕ್ಕೆ ಆಸರೆಯಾದುದು ಪಕ್ಷಾತೀತವಾಗಿ ಸ್ಥಳೀಯ ಮುಖಂಡರು, ಸಂಘ ಸಂಸ್ಥೆಗಳ ಪ್ರಮುಖರು ನೀಡಿದ ನೆರವು. ಗುರು ಬೆಳದಿಂಗಳು ಫೌಂಡೇಶನ್ ಅವರ ಮನೆಯನ್ನು ನವೀಕರಿಸಿಕೊಟ್ಟಿತ್ತು. ಎಲ್ಲರ ನೆರವಿನಿಂದಲೇ ಹಿರಿಯ ಮಗಳ ಮದುವೆಯೂ ನಡೆದಿತ್ತು. ಪ್ರಸ್ತುತ ಕಿರಿಯ ಪುತ್ರಿ ಸಿಎ ಅಂತಿಮ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಆಟೋದಲ್ಲಿ ನಡೆಸುತ್ತಿರುವ ಸಣ್ಣ ದುಡಿಮೆಯೇ ಗಂಡ- ಹೆಂಡತಿ, ಮಗಳ ಜೀವನಕ್ಕೆ ಆಧಾರವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!