ಜೀವರಾಜ್ ಪ್ರಮಾಣವಚನಕ್ಕೆ ವಿಳಂಬವಿಲ್ಲ: ಸಭಾಧ್ಯಕ್ಷ ಯು.ಟಿ. ಖಾದರ್ ಸ್ಪಷ್ಟನೆ

ಮಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಜೀವರಾಜ್ ಅವರ ಪ್ರಮಾಣವಚನ ಸ್ವೀಕಾರಕ್ಕೆ ಯಾವುದೇ ವಿಳಂಬವಾಗಿಲ್ಲ ಎಂದು ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.

ಸರ್ಕ್ಯೂಟ್ ಹೌಸ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಅರ್ಜಿ ಸಲ್ಲಿಸಲಾಗಿದ್ದು, ನಿಯಮಾವಳಿ ಪ್ರಕಾರ ಅಗತ್ಯ ಅಭಿಪ್ರಾಯಗಳನ್ನು ಪಡೆದು ಸಮಯ ನಿಗದಿಪಡಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ವಿಳಂಬವೆಂದು ಹೇಳುವುದು ಸರಿಯಲ್ಲ ಎಂದು ಹೇಳಿದರು.

ಪ್ರಜಾಪ್ರಭುತ್ವ ಸಂಸದೀಯ ವ್ಯವಸ್ಥೆ ವಿಶ್ವಾಸದ ಮೇಲೆ ನಡೆಯಬೇಕೇ ಹೊರತು ಆರೋಪಗಳ ಆಧಾರದಲ್ಲಿ ಅಲ್ಲ. ಸಂವಿಧಾನ ಮತ್ತು ಕಾನೂನಿನಡಿ ಅವಕಾಶ ನೀಡಲೇಬೇಕಿದೆ. ಇದು ವಿಶಿಷ್ಟ ಸನ್ನಿವೇಶವಾಗಿದ್ದು, ವಿಳಂಬ ಮಾಡುವ ಯಾವುದೇ ಉದ್ದೇಶ ಇಲ್ಲ ಎಂದು ತಿಳಿಸಿದರು.

ಸಂವಿಧಾನಾತ್ಮಕ ಹುದ್ದೆಗಳ ಬಗ್ಗೆ ಸಂಶಯ ಹುಟ್ಟಿಸುವಂತೆ ಅಥವಾ ತಪ್ಪು ಅಭಿಪ್ರಾಯ ಮೂಡಿಸುವಂತೆ ಚರ್ಚೆ ನಡೆಸುವುದು ಹಾಗೂ ಹೇಳಿಕೆ ನೀಡುವುದು ಸರಿಯಲ್ಲ ಎಂದು ಎಚ್ಚರಿಸಿದರು. ರಾಜ್ಯಪಾಲರು ಕರೆ ಮಾಡಿ ವಿಚಾರಿಸಿದ ಸಂದರ್ಭದಲ್ಲಿ ತಡವಾಗಿಲ್ಲ ಎಂಬುದನ್ನು ಅವರಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಸರಕಾರ ಈ ವಿಚಾರದಲ್ಲಿ ಕಾನೂನು ಹೋರಾಟ ನಡೆಸುವ ಕುರಿತು ಮುಖ್ಯಮಂತ್ರಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದು ತನ್ನಿಗೆ ಸಂಬಂಧಪಟ್ಟ ವಿಷಯವಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಡಿ ತನ್ನ ಜವಾಬ್ದಾರಿಯನ್ನು ತಾನು ನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!