ಸೆಪ್ಟೆಂಬರ್‌ಗೆ ಪೂರ್ಣಗೊಳ್ಳಲಿರುವ ತಣ್ಣೀರುಬಾವಿ ಬೋ-ಸ್ಟ್ರಿಂಗ್ ಸೇತುವೆ ಕಾಮಗಾರಿ4 ಸಾವಿರ ಕುಟುಂಬಗಳಿಗೆ ಅನುಕೂಲ: ಸಚಿವ ದಿನೇಶ್ ಗುಂಡೂರಾವ್

ಮಂಗಳೂರು: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಶುಕ್ರವಾರ ಸುಲ್ತಾನ್ ಬತ್ತೇರಿ–ತಣ್ಣೀರುಬಾವಿ ಸಂಪರ್ಕಿಸುವ ಫಲ್ಗುಣಿ (ಗುರುಪುರ) ನದಿಯ ಮೇಲಿನ ಬೋ-ಸ್ಟ್ರಿಂಗ್ ಸೇತುವೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತ್ಯಾಧುನಿಕ ತಂತ್ರಜ್ಞಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸೇತುವೆ ಕಾಮಗಾರಿ ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳ್ಳಲಿದ್ದು, ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ ಎಂದು ತಿಳಿಸಿದರು.

ಸುಲ್ತಾನ್ ಬತ್ತೇರಿಯಿಂದ ತಣ್ಣೀರುಬಾವಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ನಿರ್ಮಾಣವಾದರೆ ಸ್ಥಳೀಯರಿಗೆ ನಗರ ಪ್ರವೇಶ ಸುಲಭವಾಗಲಿದೆ. ಪ್ರಸ್ತುತ ಇಲ್ಲಿನ ನಿವಾಸಿಗಳು ಫೆರ್ರಿ ಮೂಲಕ ಅಥವಾ ಸುತ್ತು ಬಳಸಿ ಸುಮಾರು ಅರ್ಧ ಗಂಟೆ ಪ್ರಯಾಣಿಸಿ ನಗರ ತಲುಪಬೇಕಾಗಿದೆ. ಸೇತುವೆ ಪೂರ್ಣಗೊಂಡ ಬಳಿಕ ಕೇವಲ 10 ನಿಮಿಷಗಳಲ್ಲಿ ನಗರ ತಲುಪಲು ಸಾಧ್ಯವಾಗಲಿದೆ ಎಂದು ಹೇಳಿದರು.

Mangaluru Smart City Limited ಯೋಜನೆಯಡಿ ಸುಮಾರು ₹64 ಕೋಟಿ ವೆಚ್ಚದಲ್ಲಿ ಈ ಆಕರ್ಷಕ ಉಕ್ಕಿನ ಸೇತುವೆ ನಿರ್ಮಾಣಗೊಳ್ಳುತ್ತಿದೆ. ಇದರಿಂದ ಬೆಂಗ್ರೆ ಭಾಗದ ಸುಮಾರು 4,000 ಕುಟುಂಬಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.

ನದಿಯಲ್ಲಿ ದೋಣಿಗಳ ಸಂಚಾರಕ್ಕೆ ಯಾವುದೇ ಅಡಚಣೆ ಆಗದಂತೆ ಸೇತುವೆ ವಿನ್ಯಾಸ ಮಾಡಲಾಗಿದೆ. ಜೂನ್ ತಿಂಗಳ ವೇಳೆಗೆ ಸೇತುವೆಯ ಮೇಲ್ಭಾಗದ ಉಕ್ಕಿನ ಬೋ-ಸ್ಟ್ರಿಂಗ್ ವಿನ್ಯಾಸ ಅಳವಡಿಸುವ ಕಾರ್ಯ ನಡೆಯಲಿದ್ದು, ಬಳಿಕ ದೋಣಿಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ನೀರಿನ ಆಳ, ಸೇತುವೆಯ ಎತ್ತರ ಸೇರಿದಂತೆ ಎಲ್ಲಾ ಅಂಶಗಳನ್ನು ರಾಷ್ಟ್ರೀಯ ಜಲಮಾರ್ಗ ಮಾರ್ಗಸೂಚಿಯ ಅನುಸಾರ ರೂಪಿಸಲಾಗಿದೆ. ಎಲ್ಲಾ ವಿಧದ ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ಸೇತುವೆ ನಿರ್ಮಾಣಗೊಳ್ಳುತ್ತಿದ್ದು, ಮಂಗಳೂರು ನಗರದ ಪ್ರಮುಖ ಹಾಗೂ ಮಹತ್ವದ ಯೋಜನೆ ಇದಾಗಿದೆ ಎಂದು ಸಚಿವರು ಹೇಳಿದರು.

ಯೋಜನೆಯ ವಿಶೇಷತೆಗಳು
₹64 ಕೋಟಿ ವೆಚ್ಚದ ಸ್ಮಾರ್ಟ್ ಸಿಟಿ ಯೋಜನೆ
ತಣ್ಣೀರುಬಾವಿ–ನಗರ ಸಂಚಾರ ಅವಧಿ 30 ನಿಮಿಷದಿಂದ 10 ನಿಮಿಷಕ್ಕೆ ಇಳಿಕೆ
ದೋಣಿಗಳ ಸಂಚಾರಕ್ಕೆ ಅಡ್ಡಿಯಾಗದ ಅತ್ಯಾಧುನಿಕ ತಾಂತ್ರಿಕ ವಿನ್ಯಾಸ
ಬೆಂಗ್ರೆ ಭಾಗದ 4 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ನೇರ ಪ್ರಯೋಜನ
ತುರ್ತು ಸಂದರ್ಭಗಳಲ್ಲಿ ನಗರ ಆಸ್ಪತ್ರೆ ತಲುಪಲು ಹೆಚ್ಚಿನ ಅನುಕೂಲ

SHARE
Loading spinner

Leave a Reply

Your email address will not be published. Required fields are marked *

error: Content is protected !!