ಮಂಗಳೂರು: ಗುಂಡ್ಯ ಹೊಳೆಯ ಕೊಲ್ಯದಕಟ್ಟ ಡ್ಯಾಂ ಸಮೀಪ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿನಿಯರು ನೀರಲ್ಲಿ ಮುಳುಗಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.
ಮೃತರನ್ನು ಕುಟ್ರುಪ್ಪಾಡಿ ಗ್ರಾಮದ ವಿಮಲಗಿರಿ ನಿವಾಸಿಗಳಾದ ಅರ್ಪಿತಾ (15) ಹಾಗೂ ಸುನೀತ (21) ಎಂದು ಗುರುತಿಸಲಾಗಿದೆ.
ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಐವರು ಸ್ನೇಹಿತೆಯರ ತಂಡವು ಗುಂಡ್ಯ ಹೊಳೆಯ ಕೊಲ್ಯದಕಟ್ಟ ಅಣೆಕಟ್ಟು ಸಮೀಪಕ್ಕೆ ವಿಹಾರಕ್ಕೆ ತೆರಳಿತ್ತು. ಈ ವೇಳೆ ಸ್ನಾನಕ್ಕಾಗಿ ನದಿಗೆ ಇಳಿದಿದ್ದ ಅರ್ಪಿತಾ ಮತ್ತು ಸುನೀತ ಅವರಿಗೆ ನೀರಿನ ಆಳದ ಅರಿವು ಇಲ್ಲದೆ ಮುಳುಗಿದರೆಂದು ತಿಳಿದುಬಂದಿದೆ.
ಇದನ್ನು ಗಮನಿಸಿದ ಉಳಿದ ಗೆಳತಿಯರು ಅವರನ್ನು ರಕ್ಷಿಸಲು ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.
ಘಟನೆಯಿಂದಾಗಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.