ಬಂಟ್ವಾಳ: ಉರಿ ಬಿಸಿಲಿನ ತಾಪಕ್ಕೆ ಬತ್ತಿ ಹೋಗಿ ಕಲ್ಲು ಬಂಡೆಗಳು ಕಾಣಿಸುತ್ತಿದ್ದ ನೇತ್ರಾವತಿ ನದಿ ಇದೀಗ ಮತ್ತೆ ಜಲಾವೃತಗೊಂಡು ತುಂಬಿ ಹರಿಯುತ್ತಿರುವ ದೃಶ್ಯ ಜನರಲ್ಲಿ ನಿರಾಳತೆ ಮೂಡಿಸಿದೆ.
ಕೆಲವು ವಾರಗಳ ಹಿಂದೆ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ತೀವ್ರ ಕುಸಿತ ಕಂಡಿದ್ದು, ಒಳಹರಿವು ಕೂಡ ಕ್ಷೀಣವಾಗಿತ್ತು. ಇದರ ಪರಿಣಾಮ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜನರಿಗೆ ಕುಡಿಯುವ ನೀರಿನ ಅಭಾವ ಎದುರಾಗುವ ಭೀತಿ ಉಂಟಾಗಿತ್ತು.
ಆದರೆ ಕಳೆದ ಮೂರು–ನಾಲ್ಕು ದಿನಗಳಿಂದ ಘಟ್ಟ ಪ್ರದೇಶ ಹಾಗೂ ತಾಲೂಕಿನ ವಿವಿಧ ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿಗೆ ಒಳಹರಿವು ಹೆಚ್ಚಳವಾಗತೊಡಗಿದೆ. ಇದರ ಜೊತೆಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಶಂಭೂರು ಎ.ಎಂ.ಆರ್ ಡ್ಯಾಂನಿಂದ ನೀರು ಬಿಡುಗಡೆಗೊಳಿಸಿರುವುದರಿಂದ ನೇತ್ರಾವತಿ ನದಿ ಮತ್ತೆ ತುಂಬಿ ಹರಿಯುತ್ತಿದೆ.
ಎ.ಎಂ.ಆರ್ ಡ್ಯಾಂನಿಂದ ನೀರು ಬಿಡುಗಡೆ ಮಾಡಿದ ಪರಿಣಾಮ ಜಕ್ರಿಬೆಟ್ಟು ಡ್ಯಾಂ ಕೂಡ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಕೆಳಭಾಗಕ್ಕೆ ಹರಿಬಿಡಲಾಗಿದೆ. ಇದೀಗ ತುಂಬೆ ಡ್ಯಾಂವರೆಗೂ ನೀರಿನ ಮಟ್ಟ ಏರಿಕೆಯಾಗಿದ್ದು, ನದಿ ಹಸಿರಾಗಿ ಕಂಗೊಳಿಸುತ್ತಿದೆ.
ಸದ್ಯ ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಯಾವುದೇ ಸಮಸ್ಯೆ ಎದುರಾಗದ ಸಾಧ್ಯತೆ ಇದ್ದು, ಇನ್ನೂ ಕೆಲವು ದಿನಗಳ ಕಾಲ ಇದೇ ರೀತಿ ಮಳೆಯಾದರೆ ಮುಂಗಾರು ವಿಳಂಬವಾದರೂ ನೀರಿನ ಅಭಾವ ಉಂಟಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.