ಮಂಗಳೂರು : ಮೂಡುಬಿದಿರೆಯ ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಡದಂಗಡಿ ಪರಿಸರದ ಪಾಳುಬಿದ್ದ ಮನೆಯೊಂದರಲ್ಲಿ ಅನಾಥ ಶವವೊಂದು ಪತ್ತೆಯಾಗಿದೆ.
ಮೃತದೇಹವು ಸಂಪೂರ್ಣವಾಗಿ ಕೊಳೆತು ಹೋಗಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.
ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಈ ವ್ಯಕ್ತಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದ್ದು, ಶವದಿಂದ ತೀವ್ರ ದುರ್ನಾತ ಬರುತ್ತಿತ್ತು. ನೆರೆಮನೆಯವರ ನಾಯಿಯೊಂದು ಕಾಣೆಯಾಗಿದ್ದರಿಂದ, ಅದು ಎಲ್ಲಾದರೂ ಸತ್ತು ಬಿದ್ದಿರಬಹುದೇ ಎಂದು ಸುತ್ತಮುತ್ತ ಹುಡುಕಾಟ ನಡೆಸುತ್ತಿದ್ದಾಗ ಈ ಪಾಳುಬಿದ್ದ ಮನೆಯಲ್ಲಿ ಮಾನವನ ಮೃತದೇಹ ಇರುವುದು ಬೆಳಕಿಗೆ ಬಂದಿದೆ.
ಮೃತಪಟ್ಟ ವ್ಯಕ್ತಿಯನ್ನು ಕೇರಳ ಮೂಲದ ‘ಚೇಟ’ ಎಂದು ಶಂಕಿಸಲಾಗಿದೆ. ಈತ ಇದೇ ಪರಿಸರದಲ್ಲಿ ಸಣ್ಣಪುಟ್ಟ ಕೂಲಿ ಕೆಲಸಗಳನ್ನು ಮಾಡಿಕೊಂಡಿದ್ದ. ಪ್ರತಿದಿನ ಸಂಜೆ ವೇಳೆ ಮದ್ಯಪಾನ ಮಾಡಿ ಸಿಕ್ಕ ಸಿಕ್ಕ ಕಡೆಗಳಲ್ಲಿ ಮಲಗುತ್ತಿದ್ದ ಎನ್ನಲಾಗಿದ್ದು, ಅದೇ ರೀತಿ ಈ ಪಾಳುಬಿದ್ದ ಮನೆಗೆ ಬಂದು ಮೃತಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಮೂಡುಬಿದಿರೆ ಪೊಲೀಸ್ ಉಪನಿರೀಕ್ಷಕರಾದ ಪ್ರತಿಭಾ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.