ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಪ್ರಥಮ ಮಕ್ಕಳ ಮೇಳ ‘ಸರಯೂ ಬಾಲ ಯಕ್ಷ ವೃಂದ’ ಕೋಡಿಕಲ್ ತಂಡದ ಆಶ್ರಯದಲ್ಲಿ ಆಯೋಜಿಸಲಾಗುತ್ತಿರುವ ಬಹುನಿರೀಕ್ಷಿತ ‘ಸರಯೂ ಸಪ್ತಾಹ–2026’ ಕಾರ್ಯಕ್ರಮವು ಮೇ 25ರಿಂದ ಜೂನ್ 1ರವರೆಗೆ ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ಪ್ರತಿದಿನ ಸಂಜೆ 5.30ರಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕ ವರ್ಕಾಡಿ ರವಿ ಅಲೆವೂರಾಯ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರಪೂರ್ತಿ ನಡೆಯುವ ಈ ಸಾಂಸ್ಕೃತಿಕ ಉತ್ಸವದಲ್ಲಿ ಸಾಧಕರಿಗೆ ಸನ್ಮಾನ, ಯಕ್ಷಗಾನ ಬಯಲಾಟ, ಮಹಿಳಾ ತಾಳಮದ್ದಳೆ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಖ್ಯಾತ ಕಲಾವಿದರ ಸಮಾಗಮದೊಂದಿಗೆ ‘ಶ್ರೀ ಏಕಾದಶಿ ದೇವಿ ಮಹಾತ್ಮೆ’, ‘ಮೀನಾಕ್ಷಿ ಕಲ್ಯಾಣ’, ‘ಚಂದ್ರಾವಳಿ ವಿಲಾಸ’, ‘ಕಚ–ದೇವಯಾನಿ’, ‘ಕೃಷ್ಣಾರ್ಜುನ’, ‘ಬಬ್ರುವಾಹನ’, ‘ಶ್ರೀದೇವಿ ಮಹಾತ್ಮೆ’, ‘ಶ್ರೀ ಕೃಷ್ಣ ಲೀಲೆ–ಚಂದ್ರಾವಳಿ ವಿಲಾಸ’ ಹಾಗೂ ‘ಪುಣ್ಯಕೋಟಿ–ಜಾಬಾಲಿ–ನಂದಿನಿ ಸಂವಾದ’ ಮೊದಲಾದ ಪ್ರಸಂಗಗಳು ಪ್ರತಿದಿನ ಪ್ರದರ್ಶನಗೊಳ್ಳಲಿವೆ ಎಂದು ವಿವರಿಸಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆಗೈದ ಮಹೇಶ್ ಮಣಿಯಾಣಿ, ಯೋಗೀಶ್ ದೇವಾಡಿಗ ಕೊಂಚಾಡಿ, ರವಿ ಮುಂಡಾಜೆ, ವಿನಯ ಆಚಾರ್ಯ ಹೊಸಬೆಟ್ಟು, ಮುರಳೀಧರ ಭಟ್ ಕಟೀಲು, ಅಂತರಾಷ್ಟ್ರೀಯ ಕ್ರೀಡಾಪಟು ದೇವದಾಸ್ ಕೂಳೂರು, ವಿಕ್ಟರ್ ಅಂದ್ರಾದೆ ಹಾಗೂ ಕಲಾವತಿ ಟೀಚರ್ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಮೇ 31ರಂದು ದಿನಪೂರ್ತಿ ‘ಮಹಿಳಾ ಯಕ್ಷಗಾನ ಸಂಭ್ರಮ’ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಮಹಿಳಾ ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಗೌರವ ಸಂಚಾಲಕರಾದ ಡಾ. ಹರಿಕೃಷ್ಣ ಪುನರೂರು, ಸುಧಾಕರ ರಾವ್ ಪೇಜಾವರ, ವರ್ಕಾಡಿ ಮಧುಸೂದನ ಅಲೆವೂರಾಯ, ಸರಯೂ ಮಹಿಳಾ ತಂಡದ ಅಧ್ಯಕ್ಷೆ ವಿಜಯಲಕ್ಷ್ಮೀ ಎಲ್.ಎನ್., ಗೌತಂ ಭಂಡಾರಿ ಹಾಗೂ ಕುಮಾರಿ ಶಾಯಿಶಾ ಉಪಸ್ಥಿತರಿದ್ದರು.