ಮೇ 22ಕ್ಕೆ ತೆರೆಕಾಣಲಿದೆ ‘ಗಜಾನನ ಕ್ರಿಕೆಟರ್ಸ್’ ತುಳು ಸಿನಿಮಾ. ಕ್ರಿಕೆಟ್ ಹಿನ್ನೆಲೆ ಕಥೆಗೆ ಪ್ರೀಮಿಯರ್ ಶೋದಲ್ಲೇ ಭರ್ಜರಿ ಮೆಚ್ಚುಗೆ

ಪುತ್ತೂರು: ಪ್ರಜ್ವಲ್‌ ಫಿಲಂಸ್ ಲಾಂಛನದಲ್ಲಿ ತಯಾರಾಗುತ್ತಿರುವ ಪ್ರಜ್ವಲ್ ಶೆಟ್ಟಿ ನಿರ್ಮಾಣ ಹಾಗೂ ಕೀರ್ತನ್ ಭಂಡಾರಿ ನಿರ್ದೇಶನದ ‘ಗಜಾನನ ಕ್ರಿಕೆಟರ್ಸ್ (ಜಂತೊಟ್ಟು ಸಿನ್ಸ್ 1983)’ ತುಳು ಚಲನಚಿತ್ರವು ಮೇ.22ರಂದು ತೆರೆಕಾಣಲಿದೆ ಎಂದು ಚಿತ್ರದ ತಂಡ ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.

ಚಿತ್ರದ ನಾಯಕ ನಟ ವಿನೀತ್ ಕುಮಾರ್ ಅವರು ಮಾತನಾಡಿ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಗೊಂಡಿದ್ದು, ಜೊತೆಗೆ ಹಲವು ಕಡೆ ಪ್ರೀಮಿಯರ್ ಶೋನಲ್ಲಿ ಉತ್ತಮ ಮೆಚ್ಚುಗೆ ಸಿಕ್ಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ತುಳುನಾಡು ಚಿತ್ರರಂಗಕ್ಕೆ ಹೊಸ ಸಂಚಲನ ನೀಡಬಲ್ಲ ಚಿತ್ರವೆಂದು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದವರು ಹೇಳಿದರು.

ಚಿತ್ರದ ತಾರಾಗಣದಲ್ಲಿ ನವೀನ್ ಡಿ. ಪಡೀಲ್, ಅರವಿಂದ ಬೋಳಾ‌ರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ಪ್ರಕಾಶ್ ತುಮಿನಾಡು, ಉಮೇಶ್‌ ಮಿಜಾರು, ಸಮತಾ ಅಮೀನ್, ಅನ್ವಿತಾ ಸಾಗರ್, ಸರ್ವೋತ್ತಮ ಶೆಟ್ಟಿ, ವಾಲ್ಟರ್ ನಂದಳಿಕೆ, ರೂಪಾ ವರ್ಕಾಡಿ, ಲಂಚೂ ಲಾಲ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪುಷ್ಪರಾಜ್‌ ಬೊಳ್ಳಾರು, ಸಚಿನ್ ಮಾಡ, ಜೇಮ್ಸ್ ಮೆಂಡೋನ್ಸಾ ಕರಣ್ ಪೂಜಾರಿ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.

ಗೀತಾ ಸಾಹಿತ್ಯವನ್ನು ನಿರ್ದೇಶಕರಾದ ಕೀರ್ತನ್ ಭಂಡಾರಿ ರಚಿಸಿದ್ದಾರೆ. ಸೃಜನ್ ಕುಮಾರ್ ತೋನ್ಸೆ ಸಂಗೀತ ನೀಡಿದ್ದಾರೆ. ವಿನುತ್ ಕೆ. ಸುವರ್ಣ ಅವರ ಛಾಯಾಗ್ರಹಣ, ಸುಜಯ್ ಶಿವರಾಮ್ ಹಾಗೂ ಕೌಶಿಕ್ ಭಂಡಾರಿ ಅವರ ಸಂಕಲನ ಚಿತ್ರದ ತಂತ್ರಜ್ಞಾನ ಮಟ್ಟವನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ. ಸಹ ನಿರ್ಮಾಪಕರಾಗಿ ಸಂತೋಷ್ ಲಾಡ್ ಸಹಕರಿಸಿದ್ದಾರೆ ಎಂದು ತಿಳಿಸಿದರು.

ಸಹ ನಿರ್ಮಾಪಕ ರೋಹನ್ ವಾಮಂಜೂರು ಅವರು ಮಾತನಾಡಿ ತುಳು ಭಾಷೆಯಲ್ಲಿನ ದೊಡ್ಡ ಬಜೆಟ್‌ ಚಿತ್ರವಾಗಿದ್ದು, ಕ್ರಿಕೆಟ್ ಮತ್ತು ಆಟಗಾರರ ಬದುಕಿನ ಹಿನ್ನಲೆ ಆಧಾರಿತ ಕಥೆ ಹೊಂದಿದೆ. ಅಂಡರ್ ಆರ್ಮ್ ಜಗತ್ತಿನಲ್ಲಿ ನಮ್ಮ ಮಣ್ಣಿನ ಆಟವನ್ನು ಈ ಚಿತ್ರದಲ್ಲಿ ಪ್ರದರ್ಶಿಸಲಾಗಿದೆ. ಚಿತ್ರದಲ್ಲಿ ಹಾಸ್ಯ, ಪ್ರೇಮಪೂರಿತ ಭಾವನೆಗಳು ಮತ್ತು ಸಮಾಜಮುಖಿ ಸಂದೇಶವಿರುವ ಕತೆ ಒಳಗೊಂಡಿದೆ. ಈ ಚಿತ್ರದಲ್ಲಿ ನಿರ್ಮಾಪಕರಾದ ಪ್ರಜ್ವಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಎಂದವರು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಚಿತ್ರದ ನಿರ್ಮಾಪಕ ಪ್ರಜ್ವಲ್ ಶೆಟ್ಟಿ, ನಾಯಕಿಯರಾದ ಅನ್ವಿತಾ, ಸಮತಾ ಅಮೀನ್ ಮತ್ತು ಚಿತ್ರದ ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!