ದಂತದಿಂದ ತಿವಿದ ಪರಿಣಾಮ ಸಾವಿನ ಶಂಕೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಸಮೀಪದ ಅಡ್ತಲೆ ಪ್ರದೇಶದ ಕೃಷಿ ತೋಟವೊಂದರಲ್ಲಿ ಮರಿ ಆನೆಯ ಮೃತದೇಹ ಪತ್ತೆಯಾಗಿದೆ.
ಸ್ಥಳೀಯರೊಬ್ಬರಿಗೆ ಸೇರಿದ ಅಡಿಕೆ ತೋಟದಲ್ಲಿ ಮರಿ ಆನೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ಸ್ಥಳೀಯರು ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಅಧಿಕಾರಿಗಳು ಸುಳ್ಯ ಎಸಿಎಫ್ ಪ್ರಶಾಂತ್ ಪೈ ಅವರ ಸೂಚನೆಯಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್ ನೇತೃತ್ವದ ತಂಡ ಮರಿ ಆನೆಯ ಶವಪರೀಕ್ಷೆಗೆ ವ್ಯವಸ್ಥೆ ಮಾಡಿದೆ.
ಮೇಲ್ನೋಟಕ್ಕೆ, ಗಂಡು ಆನೆಯೊಂದು ತನ್ನ ದಂತದಿಂದ ತಿವಿದ ಪರಿಣಾಮ ಮರಿ ಆನೆ ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಸಾವನ್ನಪ್ಪಿದ ಮರಿ ಆನೆ ಹೆಣ್ಣಾಗಿದ್ದು, ನಿಖರ ಸಾವಿನ ಕಾರಣ ಮರಣೋತ್ತರ ಪರೀಕ್ಷೆಯ ವರದಿ ಬಳಿಕ ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.