ಮಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಬೆನ್ನಲ್ಲೇ ಸಚಿವ ಸಂಪುಟ ರಚನೆ ಕುರಿತ ರಾಜಕೀಯ ಚರ್ಚೆಗಳು ಜೋರಾಗಿರುವ ನಡುವೆಯೇ, ಸಚಿವ ಸ್ಥಾನದ ಆಕಾಂಕ್ಷೆ ಮತ್ತು ಜಮೀರ್ ಅಹ್ಮದ್ ಖಾನ್ ಅವರದ್ದು ಎನ್ನಲಾದ ವೈರಲ್ ಆಡಿಯೋ ಕುರಿತು ಕೇಳಲಾದ ಪ್ರಶ್ನೆಗಳಿಗೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಅಹ್ಮದ್ ಖಾನ್ ಹಾಗೂ ತಮ್ಮ ನಡುವೆ ಯಾವುದೇ ರೀತಿಯ ಪೈಪೋಟಿ ಇಲ್ಲ ಎಂದು ಸ್ಪಷ್ಟಪಡಿಸಿದರು.
“ಪೈಪೋಟಿ ಎಂಬ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ಪರಸ್ಪರ ಸಹಕಾರದಿಂದ ಕೆಲಸ ಮಾಡುತ್ತೇವೆ. ಯಾರು ಯಾವ ಸ್ಥಾನಕ್ಕೆ ಹೋಗಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ಹಾಗೂ ನಾಯಕತ್ವವೇ ತೀರ್ಮಾನಿಸುತ್ತದೆ” ಎಂದು ಹೇಳಿದರು.
ಕಳೆದ ಬಾರಿ ಸಚಿವ ಸಂಪುಟ ರಚನೆ ವೇಳೆ ತಮ್ಮ ಹೆಸರು ಮುಂಚೂಣಿಯಲ್ಲಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಖಾದರ್, ಪಕ್ಷದ ನಿರ್ಧಾರವೇ ಅಂತಿಮವಾಗಿದ್ದು, ಈ ಕುರಿತು ಯಾವುದೇ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಲು ಇಚ್ಛಿಸುವುದಿಲ್ಲ ಎಂದರು.
ಜಮೀರ್ ಅಹ್ಮದ್ ಖಾನ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಆದ ಬಳಿಕ ತಮ್ಮ ಸಚಿವ ಸ್ಥಾನಕ್ಕೆ ದಾರಿ ಸುಗಮವಾಗಿದೆ ಎಂಬ ಚರ್ಚೆಗಳ ಕುರಿತು ಪ್ರತಿಕ್ರಿಯಿಸಿದ ಅವರು, “ನಾನು ಈಗ ವಿಧಾನಸಭಾಧ್ಯಕ್ಷನಾಗಿದ್ದೇನೆ. ಈ ಹುದ್ದೆಯಲ್ಲಿರುವಾಗ ರಾಜಕೀಯ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸುವುದು ಸೂಕ್ತವಲ್ಲ. ಪ್ರಸ್ತುತ ನಾನು ಸ್ಪೀಕರ್ ಆಗಿಯೇ ಕಾರ್ಯನಿರ್ವಹಿಸುತ್ತಿದ್ದೇನೆ. ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತನಾಡಬೇಕಾದ ಸಂದರ್ಭ ಬಂದಾಗ ಅದನ್ನು ಆ ಸಂದರ್ಭದಲ್ಲಿ ಚರ್ಚಿಸಬಹುದು” ಎಂದು ಹೇಳಿದರು.
ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಿಧಾನಸಭೆಯ ನಿಯಮಾವಳಿ ಸಮಿತಿಗೆ ಸಂಬಂಧಿಸಿದ ಸಭೆ ಹಾಗೂ ಚರ್ಚೆಗಳಲ್ಲಿ ಭಾಗವಹಿಸಲು ತೆರಳಿದ್ದಾಗಿ ತಿಳಿಸಿದರು.
ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕಚೇರಿಗೆ ಭೇಟಿ ನೀಡಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖಾದರ್, “ನಾನು ಎಐಸಿಸಿ ಕಚೇರಿಗೆ ಹೋಗಿಲ್ಲ. ದೆಹಲಿಗೆ ತೆರಳಿದ್ದು ವಿಧಾನಸಭೆಗೆ ಸಂಬಂಧಿಸಿದ ಅಧಿಕೃತ ಕಾರ್ಯಕ್ರಮಕ್ಕಾಗಿ ಮಾತ್ರ. ಈಗ ನಾನು ಸ್ಪೀಕರ್ ಹುದ್ದೆಯಲ್ಲಿದ್ದು, ಪಕ್ಷದ ಚಟುವಟಿಕೆಗಳಿಗಿಂತ ಅಧಿಕೃತ ಜವಾಬ್ದಾರಿಗಳಿಗೆ ಆದ್ಯತೆ ನೀಡುತ್ತಿದ್ದೇನೆ” ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಲಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ವಿಸ್ತರಣೆ ಮತ್ತು ರಾಜಕೀಯ ಬೆಳವಣಿಗೆಗಳ ಕುರಿತು ಹಲವು ಊಹಾಪೋಹಗಳು ನಡೆಯುತ್ತಿರುವ ನಡುವೆಯೇ, ಖಾದರ್ ಅವರ ಈ ಹೇಳಿಕೆಗಳು ಗಮನ ಸೆಳೆದಿವೆ.