ಮಂಗಳೂರು ನಗರದ ಹೃದಯಭಾಗದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಹೆಸರಿನಲ್ಲಿ ಅಕ್ರಮ ಹಣ ವಸೂಲಿ ನಡೆಯುತ್ತಿದ್ದು, ರಾತ್ರಿ ವೇಳೆ ನಿಯಮ ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಹೋಟೆಲ್‌ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಆಗ್ರಹಿಸಿದ್ದಾರೆ.ಈ ಸಂಬಂಧ ನಗರ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ದಾಖಲೆಗಳ ಸಮೇತ ದೂರು ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.ನಗರದ ಸ್ಟೇಟ್ ಬ್ಯಾಂಕ್ ಪ್ರದೇಶದಿಂದ ರಾವ್ ಆಂಡ್ ರಾವ್ ಸರ್ಕಲ್ ಹಾಗೂ ಲೇಡಿಗೋಷನ್ ಆಸ್ಪತ್ರೆ ತನಕ ಶನಿವಾರ ಮತ್ತು ಭಾನುವಾರ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿ ವ್ಯಾಪಾರ ನಡೆಸಲಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಪ್ರಸನ್ನ ರವಿ ಆರೋಪಿಸಿದರು.
“ನಾನು ಬೀದಿ ವ್ಯಾಪಾರಸ್ಥರ ವಿರೋಧಿಯಲ್ಲ. ಅವರಿಗೆ ಸರ್ಕಾರ ನಿಗದಿತ ವ್ಯಾಪಾರ ವಲಯ (ವೆಂಡಿಂಗ್ ಝೋನ್) ಕಲ್ಪಿಸಬೇಕು. ಆದರೆ ಫುಟ್‌ಪಾತ್‌ಗಳ ಅತಿಕ್ರಮಣದಿಂದಾಗಿ ಆಸ್ಪತ್ರೆಗಳಿಗೆ ಬರುವ ರೋಗಿಗಳು, ಗರ್ಭಿಣಿಯರು ಹಾಗೂ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ಪಾದಚಾರಿಗಳು ರಸ್ತೆಯಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಪಘಾತಗಳಿಗೂ ಕಾರಣವಾಗುತ್ತಿದೆ” ಎಂದು ಅವರು ಹೇಳಿದರು.
ಅಕ್ರಮ ವಸೂಲಿ ಆರೋಪ
ಬೀದಿ ವ್ಯಾಪಾರಿಗಳ ಯೋಗಕ್ಷೇಮದ ಹೆಸರಿನಲ್ಲಿ ಸಿಐಟಿಯು ನಾಯಕರು ಇಮ್ತಿಯಾಜ್ ಹಾಗೂ ಸುನಿಲ್ ಬಜಾಲ್ ಅವರು ತಲಾ ₹20ರಂತೆ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದಾರೆ ಎಂದು ಪ್ರಸನ್ನ ರವಿ ಆರೋಪಿಸಿದರು.
“ಅಧಿಕಾರಿಗಳು ಅತಿಕ್ರಮಣ ತೆರವುಗೊಳಿಸಲು ಮುಂದಾದಾಗ ಬಡ ವ್ಯಾಪಾರಿಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತದೆ. ಆದರೆ ಪ್ರಕರಣಗಳು ಮಾತ್ರ ಬಡ ವ್ಯಾಪಾರಿಗಳ ವಿರುದ್ಧ ದಾಖಲಾಗುತ್ತವೆ. ನೈಜ ವ್ಯಾಪಾರಿಗಳಿಗೆ ಮಹಾನಗರ ಪಾಲಿಕೆ ಸೂಕ್ತ ಜಾಗ ಕಲ್ಪಿಸಬೇಕು” ಎಂದು ಅವರು ಒತ್ತಾಯಿಸಿದರು.
ರಾತ್ರಿ 3 ಗಂಟೆಯವರೆಗೆ ಹೋಟೆಲ್ ಕಾರ್ಯಾಚರಣೆ
ನಗರದಲ್ಲಿ ಹೋಟೆಲ್‌ಗಳು ರಾತ್ರಿ 11.30 ಗಂಟೆಯವರೆಗೆ ಹಾಗೂ ಪ್ರವಾಸೋದ್ಯಮ ಪರವಾನಗಿ ಹೊಂದಿರುವ ಸಂಸ್ಥೆಗಳು ಮಧ್ಯರಾತ್ರಿ 12 ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸಲು ಅನುಮತಿ ಇದ್ದರೂ, ಹಲವು ಹೋಟೆಲ್‌ಗಳು ರಾತ್ರಿ 3 ಗಂಟೆಯವರೆಗೆ ವ್ಯಾಪಾರ ನಡೆಸುತ್ತಿವೆ ಎಂದು ಪ್ರಸನ್ನ ರವಿ ಆರೋಪಿಸಿದರು.
ಕಳೆದ ಐದು ದಿನಗಳಿಂದ ರಾತ್ರಿ ವೇಳೆ ನಗರದಲ್ಲಿ ಪರಿಶೀಲನೆ ನಡೆಸಿರುವುದಾಗಿ ಹೇಳಿದ ಅವರು, ಕೆಲವು ಹೋಟೆಲ್‌ಗಳು ನಿಯಮಗಳನ್ನು ಉಲ್ಲಂಘಿಸಿ ಗ್ರಾಹಕರಿಗೆ ಸೇವೆ ಒದಗಿಸುತ್ತಿವೆ ಎಂದು ದೂರಿದರು.
‘ಎಂಪೈರ್’ ಹೋಟೆಲ್ ವಿರುದ್ಧ ಆರೋಪ
ಎಂಪೈರ್ ಹೋಟೆಲ್‌ನ ನೆಲಮಾಳಿಗೆಯಲ್ಲಿ ಅಕ್ರಮವಾಗಿ ವ್ಯಾಪಾರ ನಡೆಸಲಾಗುತ್ತಿದ್ದು, ಪೊಲೀಸ್ ವಾಹನಗಳು ಆಗಮಿಸಿದಾಗ ಮುಂಭಾಗದ ಬಾಗಿಲು ಮುಚ್ಚಿ ಪಾರ್ಕಿಂಗ್ ಪ್ರದೇಶದ ಮೂಲಕ ಗ್ರಾಹಕರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಪ್ರಸನ್ನ ರವಿ ಆರೋಪಿಸಿದರು.
“ಇತ್ತೀಚೆಗೆ ಪೊಲೀಸರನ್ನು ಒಳಗೆ ಕಳುಹಿಸಿದಾಗ ಅಲ್ಲಿದ್ದ ಹಲವರು ಸ್ಥಳದಿಂದ ತೆರಳಿದರು. ಕೆಲವು ಸಂದರ್ಭಗಳಲ್ಲಿ ಮದ್ಯದ ಅಮಲಿನಲ್ಲಿದ್ದವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಕೆಳಮಟ್ಟದಲ್ಲಿ ನಡೆಯುತ್ತಿರುವ ‘ಹಪ್ತಾ’ ವ್ಯವಸ್ಥೆಯ ಕಾರಣದಿಂದಲೇ ಇಂತಹ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬ ಸಾರ್ವಜನಿಕರ ಆರೋಪಗಳಿವೆ” ಎಂದು ಅವರು ಹೇಳಿದರು.
ಕಾನೂನು ಹೋರಾಟದ ಎಚ್ಚರಿಕೆ
ತಮ್ಮ ಹೋರಾಟವನ್ನು ಟಿಆರ್‌ಪಿ ಗಿಮಿಕ್ ಎಂದು ಟೀಕಿಸುವವರಿಗೆ ಪ್ರತಿಕ್ರಿಯಿಸಿದ ಪ್ರಸನ್ನ ರವಿ, “ಬೀದಿ ವ್ಯಾಪಾರಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದಲೇ ನಾನು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಸ್ಟೇಟ್ ಬ್ಯಾಂಕ್ ಪ್ರದೇಶದಲ್ಲಿ 138 ವ್ಯಾಪಾರಿಗಳಿಗೆ ವೆಂಡಿಂಗ್ ಝೋನ್ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗಿದೆ” ಎಂದರು.
ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಹೋಟೆಲ್‌ಗಳ ವಿರುದ್ಧ ಹಾಗೂ ಬೀದಿ ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಸಂಬಂಧ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ನಗರ ಪೊಲೀಸ್ ಆಯುಕ್ತರ ವಿರುದ್ಧವೂ ಕಾನೂನಾತ್ಮಕ ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.