ಪದವಿನಂಗಡಿಯಲ್ಲಿ ₹6 ಲಕ್ಷ ಮೌಲ್ಯದ ಎಂಡಿಎಂಎ ವಶ: ಸಿಸಿಬಿ ಕಾರ್ಯಾಚರಣೆಯಲ್ಲಿ ಆರೋಪಿಯ ಬಂಧನ

ಮಂಗಳೂರು, ಜೂನ್ 6:
ಪದವಿನಂಗಡಿ ಪರಿಸರದಲ್ಲಿರುವ ಮನೆಯಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಎಂಡಿಎಂಎ ಮಾದಕವಸ್ತು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯಿಂದ ಸುಮಾರು ₹6 ಲಕ್ಷ ಮೌಲ್ಯದ 60 ಗ್ರಾಂ ಎಂಡಿಎಂಎ ಮಾದಕವಸ್ತು, ಜಿಪ್-ಲಾಕ್ ಕವರ್ಗಳು, ಒಂದು ಮೊಬೈಲ್ ಫೋನ್ ಹಾಗೂ ಡಿಜಿಟಲ್ ತೂಕಮಾಪನ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಬಂಧಿತ ಆರೋಪಿಯನ್ನು ಧನರಾಜ್ ಪೂಜಾರಿ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಸುರತ್ಕಲ್, ಬರ್ಕೆ, ಕಾವೂರು, ಕಂಕನಾಡಿ ನಗರ ಹಾಗೂ ಬಂಟ್ವಾಳ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಹಲ್ಲೆ, ಜೀವ ಬೆದರಿಕೆ ಸೇರಿದಂತೆ ಸುಮಾರು 12 ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಲ್ಲದೆ, 2016ರಲ್ಲಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗಂಭೀರ ಹಲ್ಲೆ ಪ್ರಕರಣದಲ್ಲಿ ಧನರಾಜ್ ಪೂಜಾರಿಗೆ ನ್ಯಾಯಾಲಯ ಮೂರು ವರ್ಷಗಳ ಶಿಕ್ಷೆ ವಿಧಿಸಿತ್ತು ಎಂಬ ಮಾಹಿತಿಯೂ ಬಹಿರಂಗವಾಗಿದೆ.

ಮಾದಕವಸ್ತು ಮಾರಾಟ ಮತ್ತು ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಜಾಲದ ಇತರ ಆರೋಪಿಗಳ ಪತ್ತೆ ಹಾಗೂ ಬಂಧನಕ್ಕಾಗಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಸಿಸಿಬಿಯ ಈ ಕಾರ್ಯಾಚರಣೆಯಿಂದ ನಗರದಲ್ಲಿ ನಡೆಯುತ್ತಿದ್ದ ಮಾದಕವಸ್ತು ಜಾಲಕ್ಕೆ ಮತ್ತೊಂದು ದೊಡ್ಡ ಹೊಡೆತ ಬಿದ್ದಂತಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!