ಮಂಗಳೂರು: ಯಕ್ಷಗಾನ ಇತಿಹಾಸದಲ್ಲೇ ಮೊದಲ ಬಾರಿಗೆ ಸಮುದ್ರದ ಮಧ್ಯೆ ಐಷಾರಾಮಿ ಕೋರ್ಡೆಲಿಯಾ ಕ್ರೂಸ್ ಹಡಗಿನ ಮಾರ್ಕ್ಯೂ ಥಿಯೇಟರ್‌ನಲ್ಲಿ ಯಕ್ಷಗಾನ ಪ್ರದರ್ಶನ ನಡೆಯುವ ಮೂಲಕ ಹೊಸ ಅಧ್ಯಾಯವೊಂದು ಆರಂಭವಾಗಿದೆ. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.), ಮಂಗಳೂರು ಹಾಗೂ ತರಂಗ ಸಂಗಮ, ಮುಂಬೈ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ‘ಯಕ್ಷಧ್ರುವ ಸಮುದ್ರಯಾನ’ ಕಾರ್ಯಕ್ರಮ ಯಕ್ಷಗಾನ ಪ್ರಿಯರಿಗೆ ಅಪೂರ್ವ ಅನುಭವವನ್ನು ನೀಡಿದೆ.
ಜೂನ್ 1ರಿಂದ 5ರವರೆಗೆ ನಡೆದ ಈ ವಿಶೇಷ ಸಮುದ್ರಯಾನದಲ್ಲಿ ಸುಮಾರು 640ಕ್ಕೂ ಅಧಿಕ ತುಳು-ಕನ್ನಡಿಗ ಯಕ್ಷಗಾನ ಅಭಿಮಾನಿಗಳು, ಕಲಾವಿದರು ಹಾಗೂ ಸಂಘಟಕರು ಭಾಗವಹಿಸಿದ್ದರು. ಮುಂಬೈ-ಲಕ್ಷದ್ವೀಪ-ಮುಂಬೈ ಮಾರ್ಗದಲ್ಲಿ ಸಂಚರಿಸಿದ ಐಷಾರಾಮಿ ಕ್ರೂಸ್ ಹಡಗಿನಲ್ಲಿ ಯಕ್ಷಗಾನ ಪ್ರದರ್ಶನ ನಡೆಸುವ ಮೂಲಕ ಕರಾವಳಿಯ ಹೆಮ್ಮೆಯ ಕಲೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಾಯಿತು.
ಪಟ್ಲ ಫೌಂಡೇಶನ್‌ನ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರ ಪರಿಕಲ್ಪನೆಯಲ್ಲಿ ಮೂಡಿಬಂದ ಈ ವಿನೂತನ ಕಾರ್ಯಕ್ರಮದಲ್ಲಿ ಜೂನ್ 2ರಂದು ‘ಶ್ರೀದೇವಿ ಮಹಾತ್ಮೆ’ ಹಾಗೂ ಜೂನ್ 4ರಂದು ‘ಸಮುದ್ರ ಮಥನ’ ಯಕ್ಷಗಾನ ಪ್ರಸಂಗಗಳು ಸಮುದ್ರದ ಮಧ್ಯೆ ಪ್ರದರ್ಶನಗೊಂಡು ಪ್ರೇಕ್ಷಕರ ಮನಸೂರೆಗೊಂಡವು.
ಈ ವಿಶಿಷ್ಟ ಪ್ರಯತ್ನವು ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್, ತರಂಗ ಸಂಗಮದ ಪದಾಧಿಕಾರಿಗಳು, ಕಲಾವಿದರು ಹಾಗೂ ಯಕ್ಷಾಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದ ಕುರಿತು ಮಾತನಾಡಿದ ಉದ್ಯಮಿ ಬರೋಡಾ ಶಶಿಧರ್ ಶೆಟ್ಟಿ, “ನಾವು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನ ಯಶಸ್ಸು ಕಾರ್ಯಕ್ರಮಕ್ಕೆ ದೊರೆತಿದೆ. ಕ್ರೂಸ್ ಮೂಲಕ ಲಕ್ಷದ್ವೀಪ ತಲುಪಿ ಅಲ್ಲಿನ ದ್ವೀಪಗಳನ್ನು ವೀಕ್ಷಿಸಿದ ಅನುಭವ ಜೀವಮಾನಪೂರ್ತಿ ನೆನಪಿನಲ್ಲಿ ಉಳಿಯಲಿದೆ” ಎಂದರು.
ಲಕ್ಷದ್ವೀಪದ ರೆಸಾರ್ಟ್ ಮಾಲೀಕ ಫಿಲಿಪ್ ಮಾತನಾಡಿ, “ಪಟ್ಲ ಫೌಂಡೇಶನ್‌ನ ಇಷ್ಟು ದೊಡ್ಡ ತಂಡ ಲಕ್ಷದ್ವೀಪಕ್ಕೆ ಆಗಮಿಸಿರುವುದು ಸಂತಸದ ಸಂಗತಿ. ನಮ್ಮ ರೆಸಾರ್ಟ್‌ನಲ್ಲಿ ಅವರು ತಂಗಿರುವುದು ನಮಗೆ ಹೆಮ್ಮೆಯ ವಿಷಯ” ಎಂದು ಹೇಳಿದರು.
ಯಕ್ಷಗಾನ ಅಭಿಮಾನಿ ಸುಧೀರ್, “ದಕ್ಷಿಣ ಕನ್ನಡಕ್ಕೆ ಸೀಮಿತವಾಗಿದ್ದ ಯಕ್ಷಗಾನವನ್ನು ಪಟ್ಲ ಫೌಂಡೇಶನ್ ಅಮೆರಿಕಾ, ಜಮ್ಮು-ಕಾಶ್ಮೀರ ಸೇರಿದಂತೆ ಇದೀಗ ಲಕ್ಷದ್ವೀಪಕ್ಕೂ ಕೊಂಡೊಯ್ದಿದೆ. ಯಕ್ಷಗಾನವನ್ನು ಜಗತ್ತಿನ ಮೂಲೆಮೂಲೆಗಳಿಗೆ ತಲುಪಿಸುವ ಮಹತ್ತರ ಕನಸಿನ ಭಾಗವಾಗಿ ಈ ಸಮುದ್ರಯಾನ ಸ್ಮರಣೀಯವಾಗಿದೆ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲಾವಿದರು, “ದೇಶ-ವಿದೇಶಗಳ ಅನೇಕ ವೇದಿಕೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದೇವೆ. ಆದರೆ ಸಮುದ್ರದ ಮೇಲೆ ತೇಲುವ ಹಡಗಿನಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ ಅನುಭವ ಅಪರೂಪ. ಯಕ್ಷಗಾನದ ಇತಿಹಾಸದಲ್ಲಿ ಇದು ಸುವರ್ಣಾಕ್ಷರಗಳಲ್ಲಿ ದಾಖಲಾಗುವ ಕ್ಷಣ” ಎಂದು ಸಂತಸ ಹಂಚಿಕೊಂಡರು.
ಒಟ್ಟಾರೆ, ಕರಾವಳಿಯ ಸಾಂಸ್ಕೃತಿಕ ವೈಭವವಾದ ಯಕ್ಷಗಾನವನ್ನು ಸಮುದ್ರದ ಮಧ್ಯೆ ಪ್ರದರ್ಶಿಸುವ ಮೂಲಕ ಹೊಸ ಆಯಾಮದಲ್ಲಿ ಜಗತ್ತಿಗೆ ಪರಿಚಯಿಸಿದ ಈ ಸಮುದ್ರಯಾನ, ಯಕ್ಷಗಾನ ಇತಿಹಾಸದ ಅಪೂರ್ವ ಹಾಗೂ ಐತಿಹಾಸಿಕ ಕ್ಷಣವಾಗಿ ದಾಖಲಾಗಿದೆ.
ಗಿರೀಶ್ ಪಿಎಂ, ಕಾಸರಗೋಡು