ಆಸ್ತಿ ತೆರಿಗೆ ಹೆಚ್ಚಳ ವಿರೋಧಿಸಿ ಸಿಪಿಐ(ಎಂ) ಪ್ರತಿಭಟನೆ

ಬಡವರಿಗೆ ನಿವೇಶನ ನೀಡುವಲ್ಲಿ ವಿಳಂಬ, ಹೆಚ್ಚುವರಿ ಪಾವತಿ ಹೆಸರಿನಲ್ಲಿ ಶೋಷಣೆ: ಆರೋಪ

ಮಂಗಳೂರು, ಜೂನ್ 9: ಮಧ್ಯಮ ವರ್ಗದ ಹಾಗೂ ದುಡಿಯುವ ಜನರ ಮೇಲೆ ಆಸ್ತಿ ತೆರಿಗೆ ಹೆಚ್ಚಳದ ಮೂಲಕ ಆರ್ಥಿಕ ಹೊರೆ ಹೇರಲಾಗುತ್ತಿದೆ. ಮತ್ತೊಂದೆಡೆ, ವರ್ಷಗಳಿಂದ ನಿವೇಶನಕ್ಕಾಗಿ ಕಾಯುತ್ತಿರುವ ಬಡ ಕುಟುಂಬಗಳಿಗೆ ನ್ಯಾಯ ಒದಗಿಸುವ ಬದಲು ಹೆಚ್ಚುವರಿ ಪಾವತಿಯ ಹೆಸರಿನಲ್ಲಿ ಮತ್ತಷ್ಟು ಶೋಷಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸಿಪಿಐ(ಎಂ) ಮಂಗಳೂರು ನಗರ ಸಮಿತಿಯ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, ದೇಶದಲ್ಲಿ ಅನುಸರಿಸಲಾಗುತ್ತಿರುವ ನವ ಉದಾರೀಕರಣ ನೀತಿಗಳ ಪರಿಣಾಮವಾಗಿ ಸ್ಥಳೀಯ ಆಡಳಿತ ಸಂಸ್ಥೆಗಳು ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಬದಲು ಕೇವಲ ಆದಾಯ ಸಂಗ್ರಹಿಸುವ ಕೇಂದ್ರಗಳಾಗಿ ಪರಿವರ್ತನೆಗೊಳ್ಳುತ್ತಿವೆ ಎಂದು ಆರೋಪಿಸಿದರು.

ನಗರವನ್ನು ಕಟ್ಟಿದ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ನೌಕರರು ಹಾಗೂ ಸಾಮಾನ್ಯ ಜನರ ಮೇಲೆ ತೆರಿಗೆ ಭಾರ ಹೆಚ್ಚಿಸಲಾಗುತ್ತಿದೆ. ಆದರೆ ದೊಡ್ಡ ಬಂಡವಾಳಶಾಹಿಗಳು ಮತ್ತು ರಿಯಲ್ ಎಸ್ಟೇಟ್ ಲಾಬಿಗಳ ಹಿತಾಸಕ್ತಿಗಳನ್ನು ರಕ್ಷಿಸುವ ಕೆಲಸ ಮಾತ್ರ ನಿರಂತರವಾಗಿ ನಡೆಯುತ್ತಿದೆ ಎಂದು ಅವರು ಟೀಕಿಸಿದರು.

ವಸತಿ ಎಂಬುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದೆ. ಆದರೆ ಬಡವರ ವಸತಿ ಸಮಸ್ಯೆಯನ್ನು ಪರಿಹರಿಸುವ ಬದಲು ಅವರನ್ನು ವರ್ಷಗಟ್ಟಲೆ ಕಾಯಿಸುವುದು ಮತ್ತು ನಿವೇಶನ ಹಂಚಿಕೆಯಲ್ಲಿಯೂ ಹೆಚ್ಚುವರಿ ಹಣ ಪಾವತಿಸಲು ಒತ್ತಾಯಿಸುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ವಿರುದ್ಧವಾಗಿದೆ ಎಂದು ಹೇಳಿದರು.

ಜನರ ಶ್ರಮದಿಂದ ನಿರ್ಮಾಣವಾಗುವ ಸಂಪತ್ತನ್ನು ಕೆಲವೇ ಜನರ ಲಾಭಕ್ಕಾಗಿ ಬಳಸುವ ವ್ಯವಸ್ಥೆಯ ಪರಿಣಾಮವೇ ಇಂತಹ ತೆರಿಗೆ ದರೋಡೆ ಮತ್ತು ವಸತಿ ವಂಚನೆ. ನಗರಾಭಿವೃದ್ಧಿಯ ಹೆಸರಿನಲ್ಲಿ ಜನರ ಮೇಲೆ ಹೊರೆ ಹಾಕುವ ನೀತಿಗಳನ್ನು ಕೈಬಿಟ್ಟು, ಜನಕೇಂದ್ರಿತ ಅಭಿವೃದ್ಧಿ ಮಾದರಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಸಮಿತಿ ಸದಸ್ಯ ಬಿ.ಕೆ. ಇಮ್ತಿಯಾಜ್ ಮಾತನಾಡಿ, ಆಸ್ತಿ ತೆರಿಗೆ ಹೆಚ್ಚಳವನ್ನು ಹಿಂಪಡೆಯುವುದು, ನಿವೇಶನ ರಹಿತರಿಗೆ ತಕ್ಷಣ ನಿವೇಶನ ಹಾಗೂ ಹಕ್ಕುಪತ್ರ ವಿತರಿಸುವುದು, ಹೆಚ್ಚುವರಿ ಪಾವತಿ ಆದೇಶಗಳನ್ನು ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಸಿಪಿಐ(ಎಂ) ಜಿಲ್ಲಾ ಸಮಿತಿ ಮುಖಂಡರಾದ ಜಯಂತಿ ಬಿ. ಶೆಟ್ಟಿ, ಸಂತೋಷ್ ಬಜಾಲ್, ದಯಾನಂದ ಶೆಟ್ಟಿ, ಶ್ರೀನಾಥ್ ಕಾಟಿಪಳ್ಳ ಹಾಗೂ ಪ್ರಮೀಳಾ ಶಕ್ತಿನಗರ ಮಾತನಾಡಿದರು.

ಪ್ರತಿಭಟನೆಯ ನೇತೃತ್ವವನ್ನು ಜಯಲಕ್ಷ್ಮಿ ಜಪ್ಪಿನಮೊಗರು, ದೀಪಕ್ ಬಜಾಲ್, ಲೋಕೇಶ್ ಎಂ., ಶಶಿಧರ್ ಶಕ್ತಿನಗರ, ಮನೋಜ್ ಉರ್ವಸ್ಟೋರ್, ನಾಗೇಶ್ ಬೋಳಾರ್, ಭಾರತಿ ಬೋಳಾರ್, ರವಿಚಂದ್ರ ಕೊಂಚಾಡಿ ಹಾಗೂ ಕೃಷ್ಣ ತಣ್ಣೀರುಬಾವಿ ವಹಿಸಿದ್ದರು.

ಜಗದೀಶ್ ಬಜಾಲ್, ಮಾದುರಿ ಬೋಳಾರ್, ಜಯಪ್ರಕಾಶ್, ರೋಹಿಣಿ ಶೆಟ್ಟಿ, ಬಿಲಾಲ್ ಬೆಂಗ್ರೆ, ನಾಸೀರ್ ಬೆಂಗ್ರೆ, ಗೀತಾ ನಾಯಕ್, ಯೋಗಿತಾ ಉಳ್ಳಾಲ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ನಿವೇಶನ ರಹಿತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!