ಮಂಗಳೂರು,
ಮಂಗಳೂರಿನ ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಹಾಗೂ ಬ್ಲ್ಯಾಕ್ಮೇಲ್ ಮೂಲಕ ಸುಮಾರು ₹2.77 ಕೋಟಿ ವಸೂಲಿ ಮಾಡಿದ ಆರೋಪದಲ್ಲಿ ಯುವ ಕಾಂಗ್ರೆಸ್ ಮುಖಂಡ ನಿಝಾಮ್ ಹಾಗೂ ಆತನ ಸಹಚರ ಜಿತೇಶ್ ಬಂಧನಕ್ಕೊಳಗಾಗಿರುವ ಪ್ರಕರಣವು ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದೆ ಎಂದು ಬಿಜೆಪಿ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಘಟಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ .
ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಯು. ನಂದನ್ ಮಲ್ಯ, ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಉದ್ಯಮಿಯ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು, ಹನಿಟ್ರ್ಯಾಪ್ ಹಾಗೂ ಬ್ಲ್ಯಾಕ್ಮೇಲ್ ಮೂಲಕ ಕೋಟ್ಯಂತರ ರೂಪಾಯಿ ವಸೂಲಿ ನಡೆಸಿರುವ ಆರೋಪಗಳು ಅತ್ಯಂತ ಗಂಭೀರವಾಗಿದ್ದು, ಸಮಾಜದಲ್ಲಿ ಆತಂಕ ಮೂಡಿಸಿವೆ ಎಂದು ಅವರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಜಿತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುಳ್ಳು ಕಥೆ ಸೃಷ್ಟಿಸಿ, ನಕಲಿ ದಾಖಲೆಗಳು ಹಾಗೂ ಚಿತ್ರಗಳನ್ನು ತೋರಿಸಿ ಉದ್ಯಮಿಯನ್ನು ಬೆದರಿಸಿ ಹಣ ವಸೂಲಿ ಮಾಡಲಾಗಿದೆ ಎನ್ನುವ ಆರೋಪಗಳು ಹೊರಬಂದಿವೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಪ್ರತಿಯೊಂದು ಆಯಾಮವನ್ನು ಪೊಲೀಸರು ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ.
₹2.77 ಕೋಟಿ ರೂಪಾಯಿ ವಸೂಲಿಯ ಹಿಂದೆ ಇತರ ಪ್ರಭಾವಿ ವ್ಯಕ್ತಿಗಳ ಪಾತ್ರವಿದೆಯೇ, ಹಣದ ಹರಿವು ಎಲ್ಲಿಗೆ ಸಾಗಿತು ಎಂಬುದರ ಬಗ್ಗೆಯೂ ತನಿಖೆ ನಡೆಸಬೇಕಾಗಿದೆ. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಲಾಗಿದೆ.
ಪ್ರಕರಣ ಬೆಳಕಿಗೆ ಬಂದ ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಿರುವ ಮಂಗಳೂರು ನಗರ ಪೊಲೀಸರ ಕ್ರಮವನ್ನು ಬಿಜೆಪಿ ಯುವ ಮೋರ್ಚಾ ಶ್ಲಾಘಿಸಿದೆ. ಮುಂದಿನ ತನಿಖೆಯೂ ಪಾರದರ್ಶಕವಾಗಿ ನಡೆಯಬೇಕು ಎಂದು ಆಗ್ರಹಿಸಿದೆ.
ಒಟ್ಟಾರೆ ಈ ಪ್ರಕರಣವು ಕೇವಲ ವೈಯಕ್ತಿಕ ಅಪರಾಧವಲ್ಲದೆ, ಸಮಾಜದ ನೈತಿಕ ಮೌಲ್ಯಗಳಿಗೆ ಧಕ್ಕೆ ತರುವ ಗಂಭೀರ ಕೃತ್ಯವಾಗಿದ್ದು, ಇದರ ಹಿಂದಿರುವ ಸಂಪೂರ್ಣ ಜಾಲವನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯುವ ಮೋರ್ಚಾ ಒತ್ತಾಯಿಸಿದೆ.