ಮಂಗಳೂರು, : ‘ಹನಿ ಜೆನಿಕ್ಸ್’ ಸಂಸ್ಥೆಯ ವತಿಯಿಂದ ಆಯೋಜಿಸಲಾಗುತ್ತಿರುವ “ಕುಡ್ಲ ಪೆಲಕಾಯಿ ಪರ್ಬ- ಮಂಗಳೂರು ಹಲಸು ಹಬ್ಬ 2026” ಜೂನ್ 12ರಿಂದ 14ರವರೆಗೆ ನಗರದ ಬೆಂದೂರುವೆಲ್‌ನ ಸೇಂಟ್ ಸೆಬಾಸ್ಟಿಯನ್ ಪ್ಲಾಟಿನಂ ಜುಬಿಲಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಹಬ್ಬದ ಆಯೋಜಕ ಅಶ್ವಿನ್ ಸಿಕ್ವೆರಾ ಬರಿಮಾರ್ ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಸಾರ್ವಜನಿಕರಿಗೆ ಹಲಸಿನ ವಿವಿಧ ತಳಿಗಳು ಹಾಗೂ ಹಲಸಿನ ಉಪ ಉತ್ಪನ್ನಗಳ ಪ್ರದರ್ಶನ, ಮಾರಾಟ ಮತ್ತು ಆಸ್ವಾದನೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಜೂನ್ 12ರಂದು ಬೆಳಿಗ್ಗೆ 10.30ಕ್ಕೆ ವಿವಿಧ ಮಳಿಗೆಗಳ ಉದ್ಘಾಟನೆ ನಡೆಯಲಿದ್ದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ. ಖಾದರ್ ಶಾ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಅದೇ ದಿನ ಸಂಜೆ 7 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಬ್ರಿಜೇಶ್ ಚೌಟ, ತಾರಾನಾಥ್ ಗಟ್ಟಿ, ಡಾ. ಹೊನ್ನಪ್ಪ ಗೋವಿಂದ ಗೌಡ, ಖ್ಯಾತ ಮೋಟಿವೇಷನಲ್ ಹಾಗೂ ಇನ್ಫಾರ್ಮೇಟಿವ್ ಕಂಟೆಂಟ್ ಕ್ರಿಯೇಟರ್ ನಿತಿನ್ ಪೂಜಾರಿ ಮತ್ತು ಫಾ. ವಾಲ್ಟರ್ ಸೋಜಾ ಸೇರಿದಂತೆ ಹಲವರು ಉಪಸ್ಥಿತರಿರುವರು ಎಂದು ತಿಳಿಸಿದರು.
ಈ ಬಾರಿಯ ಹಬ್ಬದಲ್ಲಿ ದಕ್ಷಿಣ ಕನ್ನಡ, ಉಡುಪಿ, ತುಮಕೂರು, ಚಿಕ್ಕಬಳ್ಳಾಪುರ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ರೈತರು ನೇರವಾಗಿ ಭಾಗವಹಿಸಿ ತಮ್ಮ ತೋಟದ ಉತ್ಪನ್ನಗಳನ್ನು ಮಾರಾಟ ಮಾಡಲಿದ್ದಾರೆ. ಹಲಸಿನ ವಿವಿಧ ತಳಿಗಳ ಜೊತೆಗೆ ಕೊಡಗಿನ ಜನಪ್ರಿಯ ಬೆಣ್ಣೆ ಹಣ್ಣು ಹಾಗೂ ರಾಮನಗರದ ರಾಸಾಯನಿಕ ಮುಕ್ತ ನೈಸರ್ಗಿಕ ಮಾವಿನ ಹಣ್ಣುಗಳು ಗ್ರಾಹಕರಿಗೆ ನೇರವಾಗಿ ಲಭ್ಯವಾಗಲಿವೆ. ಇದರೊಂದಿಗೆ ರಂಬುತಾನ್, ಡ್ರಾಗನ್ ಫ್ರೂಟ್, ಪುಲಾಸಾನ್, ಮ್ಯಾಂಗೋಸ್ಟೀನ್ ಸೇರಿದಂತೆ ವಿವಿಧ ಎಕ್ಸೋಟಿಕ್ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟವೂ ನಡೆಯಲಿದೆ.
ನಿಟ್ಟೆ ಹೋಟೆಲ್ ಮ್ಯಾನೇಜ್‌ಮೆಂಟ್ ಹಾಗೂ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಾಲಿಟಿ ಸರ್ವಿಸಸ್ ವಿದ್ಯಾರ್ಥಿಗಳ ಸಹಯೋಗದಲ್ಲಿ ಹಲಸಿನಿಂದ ತಯಾರಾಗುವ ವಿವಿಧ ತಿಂಡಿ-ತಿನಿಸುಗಳ ‘ಲೈವ್ ಫುಡ್ ಕೌಂಟರ್’ ಹಬ್ಬದ ಪ್ರಮುಖ ಆಕರ್ಷಣೆಯಾಗಲಿದೆ. ಜೂನ್ 13ರಂದು ಸಹ್ಯಾದ್ರಿ ಕಾಲೇಜಿನ ಎಂಬಿಎ ವಿಭಾಗದ ವಿದ್ಯಾರ್ಥಿಗಳು ಹಾಗೂ ಜೂನ್ 14ರಂದು ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದ ನಿರ್ವಹಣೆಯಲ್ಲಿ ಕೈಜೋಡಿಸಲಿದ್ದಾರೆ.
ಇದೇ ವೇಳೆ ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆಗಳು, ಸಾರ್ವಜನಿಕರಿಗಾಗಿ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮನೋರಂಜನಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಆಯೋಜಕರ ಪ್ರಮುಖರಾದ ಸೇಲ್ಡನ್ ಕ್ರಾಸ್ತ, ರಿಯಾನ್ ಮೌನಿಸ್, ಭಾಸ್ಕರ್ ಕಟ್ಟಾ ಹಾಗೂ ಜಾಕ್ಸನ್ ಸಾಲ್ದಾನ ಉಪಸ್ಥಿತರಿದ್ದರು.