ಶ್ರೀನಿವಾಸ ವಿಶ್ವವಿದ್ಯಾಲಯಕ್ಕೆ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿ; ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ

ಮಂಗಳೂರು, ಜೂ.10: ಶಿಕ್ಷಣ, ಸಂಶೋಧನೆ ಹಾಗೂ ನವೀನತೆಯ ಕ್ಷೇತ್ರದಲ್ಲಿ ನಿರಂತರ ಸಾಧನೆ ಮಾಡುತ್ತಿರುವ ಶ್ರೀನಿವಾಸ ಸಂಸ್ಥೆಗಳು ಮತ್ತೊಮ್ಮೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ ಪ್ರತಿಷ್ಠಿತ ಗ್ಲೋಬಲ್ ಎಜುಕೇಷನ್ ಸಮ್ಮಿಟ್‌ನಲ್ಲಿ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿವೆ ಎಂದು ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಶ್ರೀನಿವಾಸ ರಾವ್ ತಿಳಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿವಂಗತ ಶಿಕ್ಷಣ ದಾರ್ಶನಿಕ ಹಾಗೂ ಸಂಸ್ಥಾಪಕರಾದ ಡಾ. ಸಿ.ಎ.ಎ. ರಾಘವೇಂದ್ರ ರಾವ್ ಅವರ ದೂರದೃಷ್ಟಿಯ ಫಲವಾಗಿ ಬೆಳೆದಿರುವ ಶ್ರೀನಿವಾಸ ಸಂಸ್ಥೆಗಳು ಇಂದು ಉನ್ನತ ಶಿಕ್ಷಣ, ಸಂಶೋಧನೆ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗಮುಖಿ ಶಿಕ್ಷಣ ಕ್ಷೇತ್ರದಲ್ಲಿ ದೇಶದ ಪ್ರಮುಖ ಶಿಕ್ಷಣ ಸಮೂಹಗಳಲ್ಲಿ ಒಂದಾಗಿ ಗುರುತಿಸಿಕೊಂಡಿವೆ ಎಂದರು.

ಟಿಸಿಎಸ್, ಮೈಕ್ರೋಸಾಫ್ಟ್, ಐಬಿಎಂ, ಗೂಗಲ್, ಇಂಟೆಲ್, ಯುಐಪಾತ್ ಸೇರಿದಂತೆ ಹಲವು ಬಹುರಾಷ್ಟ್ರೀಯ ಸಂಸ್ಥೆಗಳೊಂದಿಗೆ ಶೈಕ್ಷಣಿಕ ಸಹಭಾಗಿತ್ವ ಹೊಂದಿರುವ ಶ್ರೀನಿವಾಸ ವಿಶ್ವವಿದ್ಯಾಲಯವು ಕರ್ನಾಟಕದಲ್ಲೇ ಮೊದಲ ಬಾರಿಗೆ ಏರ್‌ಕ್ರಾಫ್ಟ್ ಮೆಂಟಿನೆನ್ಸ್ ಎಂಜಿನಿಯರಿಂಗ್‌ನಲ್ಲಿ ನಾಲ್ಕು ವರ್ಷದ ಬಿ.ಟೆಕ್ ಕಾರ್ಯಕ್ರಮ ಆರಂಭಿಸಿದೆ. ಎಥ್ನೋಟೆಕ್ ಹಾಗೂ ಎನ್‌ಎಸ್‌ಡಿಸಿ ಸಹಯೋಗದಲ್ಲಿ ಸ್ಥಾಪಿತವಾಗಿರುವ ಸಿ.ಎ.ಎ. ರಾಘವೇಂದ್ರ ರಾವ್ ಸೆಂಟರ್ ಫಾರ್ ಫ್ಯೂಚರ್ ಸ್ಕಿಲ್ ಲ್ಯಾಬ್ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಕೌಶಲ್ಯ ತರಬೇತಿ ನೀಡುತ್ತಿದೆ ಎಂದು ವಿವರಿಸಿದರು.

ಸಂಶೋಧನಾ ಕ್ಷೇತ್ರದಲ್ಲಿಯೂ ವಿಶ್ವವಿದ್ಯಾಲಯವು 593 ಕಾಪಿರೈಟ್‌ಗಳು, 28 ಪೇಟೆಂಟ್‌ಗಳು, 157ಕ್ಕೂ ಅಧಿಕ ಪೇಟೆಂಟ್ ಪ್ರಕಟಣೆಗಳು ಹಾಗೂ 2000ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಸಂಶೋಧನಾ ಪ್ರಕಟಣೆಗಳನ್ನು ದಾಖಲಿಸಿದೆ. ಅಲ್ಲದೆ ಎಐಸಿಟಿಇ, ಇಸ್ರೋ, ಡಿಎಸ್‌ಟಿ, ಕೆಎಸ್‌ಸಿಎಸ್‌ಟಿ ಸೇರಿದಂತೆ ವಿವಿಧ ಸಂಸ್ಥೆಗಳಿಂದ 115 ಕೋಟಿಗೂ ಅಧಿಕ ಸಂಶೋಧನಾ ಅನುದಾನವನ್ನು ಪಡೆದುಕೊಂಡಿದೆ ಎಂದರು.

ಬ್ಯಾಂಕಾಕ್‌ನಲ್ಲಿ ನಡೆದ ಗ್ಲೋಬಲ್ ಎಜುಕೇಷನ್ ಸಮ್ಮಿಟ್‌ನಲ್ಲಿ ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಶ್ರೀನಿವಾಸ ಮಯ್ಯ ಡಿ ಹಾಗೂ ತರಬೇತಿ ಮತ್ತು ನೇಮಕಾತಿ ಅಧಿಕಾರಿ ಡಾ. ಧೀರಜ್ ಹೆಬ್ರಿ ಭಾಗವಹಿಸಿ ಸಂಸ್ಥೆಯ ಶೈಕ್ಷಣಿಕ ಸಾಧನೆಗಳನ್ನು ಜಾಗತಿಕ ವೇದಿಕೆಯಲ್ಲಿ ಅನಾವರಣಗೊಳಿಸಿದ್ದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಧುರಕಿಜ್ ಪುಂಡಿತ್ ವಿಶ್ವವಿದ್ಯಾಲಯ, ಸಿಯಾಮ್ ವಿಶ್ವವಿದ್ಯಾಲಯ, ಬ್ಯಾಂಕಾಕ್ ವಿಶ್ವವಿದ್ಯಾಲಯ ಹಾಗೂ ಎಡುಸ್ಕಿಲ್ಸ್ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಲಾದ ಈ ಶೃಂಗಸಭೆಯಲ್ಲಿ ಭಾರತ ಹಾಗೂ ಥೈಲ್ಯಾಂಡ್‌ನ ಶಿಕ್ಷಣ ತಜ್ಞರು, ಉದ್ಯಮ ನಾಯಕರು ಮತ್ತು ಸಂಶೋಧಕರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯಕ್ಕೆ “ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್ ಇನ್ ಹೈಯರ್ ಎಜುಕೇಷನ್ ಆ್ಯಂಡ್ ರಿಸರ್ಚ್”, ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ “ಎಕ್ಸಲೆನ್ಸ್ ಇನ್ ಇಂಡಸ್ಟ್ರಿ ಇಂಟಿಗ್ರೇಟೆಡ್ ಟೆಕ್ನಿಕಲ್ ಎಜುಕೇಷನ್ ಅವಾರ್ಡ್” ಹಾಗೂ ಡಾ. ಶ್ರೀನಿವಾಸ ಮಯ್ಯ ಡಿ ಅವರಿಗೆ “ವಿಷನರಿ ಎಜುಕೇಷನ್ ಲೀಡರ್ ಅವಾರ್ಡ್” ಪ್ರದಾನ ಮಾಡಲಾಯಿತು.

ಶಿಕ್ಷಣ, ಸಂಶೋಧನೆ, ಉದ್ಯಮ-ಸಂಯೋಜಿತ ಕಲಿಕೆ ಹಾಗೂ ವಿದ್ಯಾರ್ಥಿ ಅಭಿವೃದ್ಧಿ ಕ್ಷೇತ್ರಗಳಲ್ಲಿ ಶ್ರೀನಿವಾಸ ಸಂಸ್ಥೆಗಳು ನೀಡಿರುವ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.

ಸಮ್ಮಿಟ್‌ನ ಅಂಗವಾಗಿ ಡಾ. ಶ್ರೀನಿವಾಸ ಮಯ್ಯ ಡಿ ಹಾಗೂ ಡಾ. ಧೀರಜ್ ಹೆಬ್ರಿ ಅವರು ಥೈಲ್ಯಾಂಡ್‌ನ ಪ್ರಮುಖ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿ ಹಾಗೂ ಸಿಬ್ಬಂದಿ ವಿನಿಮಯ ಕಾರ್ಯಕ್ರಮಗಳು, ಸಂಯುಕ್ತ ಸಂಶೋಧನೆ, ಜಾಗತಿಕ ಇಂಟರ್ನ್‌ಶಿಪ್‌ಗಳು, ಉದ್ಯೋಗಾವಕಾಶಗಳು ಮತ್ತು ಆಧುನಿಕ ಶೈಕ್ಷಣಿಕ ಸೌಲಭ್ಯಗಳ ಕುರಿತು ಸಮಾಲೋಚನೆ ನಡೆಸಿದರು.

ಈ ಜಾಗತಿಕ ಸಂಪರ್ಕಗಳು ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಮಟ್ಟದ ಶಿಕ್ಷಣ, ಸಂಶೋಧನಾ ಅವಕಾಶಗಳು ಹಾಗೂ ಉತ್ತಮ ಉದ್ಯೋಗಾವಕಾಶಗಳನ್ನು ಕಲ್ಪಿಸಲು ನೆರವಾಗಲಿವೆ. ಸ್ಥಳೀಯ ವಿದ್ಯಾರ್ಥಿಗಳಿಗೆ ಜಾಗತಿಕ ಶಿಕ್ಷಣ, ಜಾಗತಿಕ ಅನುಭವ ಮತ್ತು ಜಾಗತಿಕ ಉದ್ಯೋಗಾವಕಾಶಗಳನ್ನು ತಲುಪಿಸುವುದು ಶ್ರೀನಿವಾಸ ಸಂಸ್ಥೆಗಳ ಧ್ಯೇಯವಾಗಿದ್ದು, ಬ್ಯಾಂಕಾಕ್‌ನಲ್ಲಿ ದೊರೆತ ಈ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಆ ಧ್ಯೇಯದ ಯಶಸ್ಸಿಗೆ ದೊರೆತ ಜಾಗತಿಕ ಮಾನ್ಯತೆಯಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಪತಿ ಡಾ. ಸತ್ಯನಾರಾಯಣ ರೆಡ್ಡಿ, ಕುಲಸಚಿವ ಡಾ. ಅನಿಲ್ ಕುಮಾರ್, ಮೌಲ್ಯಮಾಪನ ಕುಲಸಚಿವ ಹಾಗೂ ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಶ್ರೀನಿವಾಸ ಮಯ್ಯ ಡಿ, ಅಭಿವೃದ್ಧಿ ಕುಲಸಚಿವ ಡಾ. ಅಜಯ್ ಹಾಗೂ ತರಬೇತಿ ಮತ್ತು ನೇಮಕಾತಿ ಅಧಿಕಾರಿ ಡಾ. ಧೀರಜ್ ಹೆಬ್ರಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!