ಮಂಗಳೂರು, ಜೂನ್ 13: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ಇತ್ತೀಚಿನ ಕಾರ್ಯವೈಖರಿಯಿಂದ ದೇಶದಲ್ಲಿ ಪ್ರಜಾಪ್ರಭುತ್ವದ ಮೇಲಿನ ಜನರ ನಂಬಿಕೆ ಕುಸಿಯುವಂತಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಆರೋಪಿಸಿದರು.
ನಗರದ ಮಹಾನಗರ ಪಾಲಿಕೆ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ವೋಟ್ ಚೋರಿ” ಮತ್ತು “ಸೀಟ್ ಚೋರಿ” ಪ್ರಜಾಪ್ರಭುತ್ವಕ್ಕೆ ಗಂಭೀರ ಹೊಡೆತ ನೀಡಿದ್ದು, ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ಮೌನ ವಹಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಟೀಕಿಸಿದರು.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಅವರ ರಾಜ್ಯಸಭಾ ನಾಮಪತ್ರ ತಿರಸ್ಕೃತಗೊಂಡಿರುವುದು ಹಾಗೂ ಜಾರ್ಖಂಡ್ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯ ನಾಮಪತ್ರದಲ್ಲಿದ್ದ ಲೋಪಗಳನ್ನು ಕಡೆಗಣಿಸಿರುವುದು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಕುರಿತು ಅನುಮಾನ ಮೂಡಿಸಿದೆ ಎಂದು ಹೇಳಿದರು.
ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಗೆ ಕಾಂಗ್ರೆಸ್ ವಿರೋಧಿಯಲ್ಲ. ಆದರೆ ಅದರ ಅನುಷ್ಠಾನ ಪಾರದರ್ಶಕವಾಗಿರಬೇಕು. ವಿವಿಧ ರಾಜ್ಯಗಳಲ್ಲಿ ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ ಹೆಸರುಗಳು, ಮರು ಸೇರ್ಪಡೆಯಾದ ಮತದಾರರು ಹಾಗೂ ದಾಖಲಾಗಿರುವ ದೂರುಗಳ ಕುರಿತು ಚುನಾವಣಾ ಆಯೋಗ ಸ್ಪಷ್ಟ ಮಾಹಿತಿ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಪಶ್ಚಿಮ ಬಂಗಾಳ, ತೆಲಂಗಾಣ ಹಾಗೂ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದ ಅಕ್ರಮಗಳು ಮತ್ತು ಅಸಂಗತತೆಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಮತದಾರರ ಮಾಹಿತಿ ಮ್ಯಾಪಿಂಗ್ ಕುರಿತು ಸಂಪೂರ್ಣ ವಿವರಗಳನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಪ್ರಾದೇಶಿಕ ಪಕ್ಷಗಳನ್ನು ದುರ್ಬಲಗೊಳಿಸುವ ಮೂಲಕ ಸರ್ವಾಧಿಕಾರಿ ಆಡಳಿತದತ್ತ ಸಾಗುತ್ತಿದೆ ಎಂದು ಆರೋಪಿಸಿದ ಅವರು, ಈ ಧೋರಣೆಯ ವಿರುದ್ಧ ಕಾಂಗ್ರೆಸ್ ಪಕ್ಷ ದೇಶವ್ಯಾಪಿ ಮೂರು ತಿಂಗಳ ಹೋರಾಟ ನಡೆಸಲು ತೀರ್ಮಾನಿಸಿದೆ ಎಂದು ತಿಳಿಸಿದರು.
ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯಕ್ಕೆ ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡಲಿದೆ. ಆದರೆ ಯಾವುದೇ ಕಾರಣಕ್ಕೂ ನೈಜ ಮತದಾರರ ಹೆಸರನ್ನು ಅನ್ಯಾಯವಾಗಿ ಕೈಬಿಡಲು ಅಥವಾ ಅಕ್ರಮ ಸೇರ್ಪಡೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿಧರ್ ಹೆಗ್ಡೆ, ನಾಗೇಶ್, ಪ್ರಕಾಶ್ ಸಾಲಿಯಾನ್, ನಾಗೇಂದ್ರ, ಇಮ್ರಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.