ಮಂಗಳೂರು: ಮಕ್ಕಳ ಸಮಗ್ರ ಬೆಳವಣಿಗೆಗೆ ಪೋಷಕರು ನಿರಂತರ ಪ್ರೋತ್ಸಾಹ ನೀಡಿದಾಗ ಅವರ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ. ಜೊತೆಗೆ ಮಕ್ಕಳನ್ನು ಅತಿಯಾದ ಮಾಧ್ಯಮ ಬಳಕೆಯಿಂದ ದೂರವಿರಿಸುವುದು ಅಗತ್ಯ ಎಂದು ಉರ್ವ ಇಮ್ಯಾನುಯೆಲ್ ಚರ್ಚ್ ಧರ್ಮಗುರು ಹಾಗೂ ಶಾಲಾ ಸಂಚಾಲಕರಾದ ವಂ. ಬೆಂಜಮೀನ್ ಪಿಂಟೊ ಹೇಳಿದರು.
ಅವರು ಉರ್ವ ಚರ್ಚ್ ಸಭಾಂಗಣದಲ್ಲಿ ನಡೆದ ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಸಭೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಭೆಯಲ್ಲಿ ಶಿಕ್ಷಕರಾದ ರಾಜ್ ಕಿರಣ್ ಡಿಕುನ್ಹಾ ಅವರು 2025-26ನೇ ಶೈಕ್ಷಣಿಕ ಸಾಲಿನ ಶಾಲಾ ವರದಿಯನ್ನು ವಾಚಿಸಿದರು. ಶಿಕ್ಷಕ-ರಕ್ಷಕ ಸಂಘದ ಖಜಾಂಜಿಯಾದ ಡಾರ್ವಿನ್ ಕರ್ಕಡ ಅವರು ಸಂಘದ ಆದಾಯ-ವೆಚ್ಚಗಳ ವಿವರ ಮಂಡಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಂ. ಅರುಣ್ ವಿಲ್ಸನ್ ಲೋಬೊ ಅವರು, ಚಿತ್ರಕಲೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಹೃದಯ ಮತ್ತು ಮನಸ್ಸಿನ ಸಮರ್ಪಣೆ ಅಗತ್ಯವಾಗಿದ್ದು, ಅದರಿಂದ ಉತ್ತಮ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಕಿಯರಾದ ಪ್ರಮೀಳ ತಾವ್ರೊ ಹಾಗೂ ತ್ರಿವೇಣಿ ಅವರು ಶಾಲೆಯ ನಿಯಮಾವಳಿಗಳ ಕುರಿತು ಮಾಹಿತಿ ನೀಡಿದರು. ಶಾಲಾ ಮುಖ್ಯಶಿಕ್ಷಕರಾದ ಅಲೋಶಿಯಸ್ ಡಿಸೋಜ ಅವರು ಶಾಲೆಯ ಶೈಕ್ಷಣಿಕ ಚಟುವಟಿಕೆಗಳ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ 2026-27ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಜಂಟಿ ಕಾರ್ಯದರ್ಶಿ ಶೈಲಶ್ರೀ ಗಂಗೋಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಪೋಷಕರು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿಯರಾದ ಲವೀನಾ ಡಿಕುನ್ಹಾ ಮತ್ತು ಶಾಂತಿ ಲೋಬೊ ನಿರೂಪಿಸಿದರು. ಶಿಕ್ಷಕಿಯರಾದ ರೀಟಾ ಮತ್ತು ವಿಶಿತಾ ಸ್ವಾಗತಿಸಿದರು. ಪ್ರಮೀಳಾ ಕುಮಾರಿ ಹಾಗೂ ತೀರ್ಥರಾಮ್ ವಂದಿಸಿದರು