ಮಂಗಳೂರು,
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಆಶ್ರಯದಲ್ಲಿ ನಡೆಯಲಿರುವ ಮಹಾರಾಜ ಟ್ರೋಫಿ ಟಿ20 ಲೀಗ್‌ಗಾಗಿ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕನಾಗಿ ಭಾರತ ಕ್ರಿಕೆಟಿಗ ಕರುಣ್ ನಾಯರ್ ಹಾಗೂ ಉಪನಾಯಕನಾಗಿ ಶ್ರೇಯಸ್ ಗೋಪಾಲ್ ಅವರನ್ನು ಆಯ್ಕೆ ಮಾಡಲಾಗಿದೆ.
ನಗರದ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ನಡೆದ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ಜರ್ಸಿ ಅನಾವರಣ ಹಾಗೂ ತಂಡದ ಆಂಥಮ್ ಬಿಡುಗಡೆ ಕಾರ್ಯಕ್ರಮದಲ್ಲಿ ನಾಯಕ ಮತ್ತು ಉಪನಾಯಕರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಯಿತು.
ಈ ಬಾರಿಯ ಆಟಗಾರರ ಹರಾಜಿನಲ್ಲಿ ಕರುಣ್ ನಾಯರ್ ಅವರು 18 ಲಕ್ಷ ರೂಪಾಯಿಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡಕ್ಕೆ ಸೇರ್ಪಡೆಯಾಗಿದ್ದು, ತಂಡದ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದಲ್ಲಿ ಕರುಣ್ ನಾಯರ್ (ನಾಯಕ), ಶ್ರೇಯಸ್ ಗೋಪಾಲ್ (ಉಪನಾಯಕ), ಧೀರಜ್ ಜೆ. ಗೌಡ, ಎಸ್.ಜೆ. ನಿಕಿನ್ ಜೋಸ್, ಸೂರಜ್ ಅಹುಜಾ, ವೆಂಕಟೇಶ್ ಎಂ., ಆದರ್ಶ್ ಎಸ್.ಜೆ., ಕುಶಾಲ್ ಎಂ. ವಾಧ್ವಾನಿ, ಸಿದ್ಧಾರ್ಥ್ ಅಖಿಲ್, ರಾಜ್ವಿರ್ ವಾಧ್ವಾ, ಅನ್ವಯ್ ದ್ರಾವಿಡ್, ಸಂತೋಖ್ ಸಿಂಗ್, ಕಾರ್ತಿಕ್ ಸಿ.ಎ., ಕೌಶಿಕ್ ವಿ., ಪೃಥ್ವಿರಾಜ್ ಶೇಖಾವತ್, ಆರ್ಯ ಜೆ. ಗೌಡ, ಆರೋನ್ ಸಿರಿಲ್ ಕ್ರಿಸ್ಟಿ ಹಾಗೂ ರತನ್ ಬಿ.ಆರ್. ಸ್ಥಾನ ಪಡೆದಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ತಂಡದ ಬ್ರ್ಯಾಂಡ್ ಅಂಬಾಸಿಡರ್, ನಟ ಹಾಗೂ ನಿರ್ದೇಶಕ ರೂಪೇಶ್ ಶೆಟ್ಟಿ, “ಭಾರತದ ಸ್ಟಾರ್ ಕ್ರಿಕೆಟಿಗ ಕೆ.ಎಲ್. ರಾಹುಲ್ ಅವರು ಮಂಗಳೂರಿನ ಯುವ ಪ್ರತಿಭೆಗಳಿಗೆ ಮಾದರಿಯಾಗಿದ್ದಾರೆ. ಅವರಂತೆಯೇ ಇನ್ನಷ್ಟು ಪ್ರತಿಭಾವಂತ ಕ್ರಿಕೆಟಿಗರು ಕರಾವಳಿಯಿಂದ ಹೊರಹೊಮ್ಮಬೇಕು ಎಂಬುದು ನಮ್ಮ ಉದ್ದೇಶ. ಅದಕ್ಕಾಗಿ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡಕ್ಕೆ ಎಲ್ಲರೂ ಬೆಂಬಲ ನೀಡಬೇಕು. ಈ ತಂಡದ ಮೂಲಕ ಇನ್ನಷ್ಟು ಯುವ ಆಟಗಾರರಿಗೆ ಅವಕಾಶ ದೊರೆಯಲಿ. ಈ ಬಾರಿಯೂ ಕಪ್ ನಮ್ಮದಾಗಲಿ” ಎಂದು ಆಶಿಸಿದರು.
ತಂಡದ ನಾಯಕ ಕರುಣ್ ನಾಯರ್ ಹಾಗೂ ಉಪನಾಯಕ ಶ್ರೇಯಸ್ ಗೋಪಾಲ್ ಮಾತನಾಡಿ, “ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡವನ್ನು ಪ್ರತಿನಿಧಿಸುವ ಅವಕಾಶ ದೊರೆತಿರುವುದು ಸಂತೋಷ ಹಾಗೂ ಹೆಮ್ಮೆಯ ವಿಷಯ. ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಬದ್ಧರಾಗಿದ್ದೇವೆ” ಎಂದು ಹೇಳಿದರು. ಇದೇ ವೇಳೆ ತುಳುವಿನಲ್ಲಿ “ಈ ಸಲ ಕಪ್ ನಮ್ಮನೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೆಎಸ್‌ಸಿಎ ಮಂಗಳೂರು ವಲಯದ ಅಧ್ಯಕ್ಷ ಡಾ. ಶ್ರೀಕಾಂತ್ ರೈ, ಕೆಎಸ್‌ಸಿಎ ವ್ಯವಸ್ಥಾಪಕ ಸಮಿತಿ ಸದಸ್ಯ ಅವಿನಾಶ್ ವೈದ್ಯ ಹಾಗೂ ಸಂಸ್ಥೆಯ ಗೌರವ ಖಜಾಂಚಿ ಬಿ.ಎನ್. ಮಧುಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.