ಮಂಗಳೂರು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ SUEZ Projects Pvt. Ltd. ಹಾಗೂ ಹಾರ್ಮೋನಿ ವೈಬ್ಸ್ ಸಂಗೀತ ಬಳಗದ ಸಂಯುಕ್ತ ಆಶ್ರಯದಲ್ಲಿ ಒಲವಿನಹಳ್ಳಿ ಆಶ್ರಮದಲ್ಲಿ ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಸೇವೆಗೆ ಒತ್ತು ನೀಡುವ ವಿಶೇಷ ಕಾರ್ಯಕ್ರಮ ನಡೆಯಿತು.
SUEZ Projectsನ ಆಡಳಿತ ವ್ಯವಸ್ಥಾಪಕ ರಾಕೇಶ್ ಶೆಟ್ಟಿ ಬಿ.ಎಸ್. ಅವರ ನೇತೃತ್ವದಲ್ಲಿ ಹಾಗೂ ಹಾರ್ಮೋನಿ ವೈಬ್ಸ್ ಬಳಗದ ಗೋಪಾಲಕೃಷ್ಣ ಕುಂದರ್ ಅವರ ಸಹಯೋಗದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಡಾ. ಅನಂತ ಪ್ರಭು ಜಿ., ಶೇಖ್ ಸಲೀಂ ಮತ್ತು ಸತೀಶ್ ಇರಾ ವಿಶೇಷ ಅತಿಥಿಗಳಾಗಿ ಭಾಗವಹಿಸಿದರು.
ಕಾರ್ಯಕ್ರಮವು ಆಶ್ರಮದ ನಿವಾಸಿಗಳನ್ನು ಅವರ ವಸತಿ ಕೊಠಡಿಗಳಲ್ಲಿ ಭೇಟಿ ಮಾಡುವ ಮೂಲಕ ಆರಂಭಗೊಂಡಿತು. ಬಳಿಕ ತೆಂಗು, ಮಾವು, ಹಲಸು ಹಾಗೂ ಬಾಳೆ ಸೇರಿದಂತೆ ವಿವಿಧ ಫಲವೃಕ್ಷಗಳ ಸಸಿಗಳನ್ನು ನೆಡುವ ಮೂಲಕ ವೃಕ್ಷಾರೋಪಣ ಕಾರ್ಯಕ್ರಮ ನಡೆಯಿತು. ಈ ಮೂಲಕ ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಯ ಸಂದೇಶ ಸಾರಲಾಯಿತು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆನಂದ ಕೊಲ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಗೋಪಾಲಕೃಷ್ಣ ಕುಂದರ್ ಹಾಗೂ ಬಾಬು ಎಂ. ಜಾರ್ಜ್ ಅವರು ಸಂಗೀತ ಪ್ರತಿಭೆಯನ್ನು ಸಮಾಜದ ಹಿಂದುಳಿದ ಹಾಗೂ ಅಗತ್ಯವಿರುವವರ ಸಂತೋಷಕ್ಕಾಗಿ ಬಳಸುವಂತೆ ಕರೆ ನೀಡಿದರು.
ಹಾರ್ಮೋನಿ ವೈಬ್ಸ್ ಸದಸ್ಯರಾದ ಗೋಪಾಲಕೃಷ್ಣ ಕುಂದರ್, ಬಾಬು ಎಂ. ಜಾರ್ಜ್, ಅಶೋಕ್ ಕುಮಾರ್, ವಿವೇಕ್ ಅಮನ್, ರವೀಂದ್ರ ಸುವರ್ಣ, ಗಜಾನನ ಶೇನೈ, ಸಪ್ನಾ, ಕ್ಷಮಾ, ಸುನೀತಾ, ಲೋಲಿತಾ, ಸಿಂಚನಾ, ಗಗನ್ ಹಾಗೂ ಧೀಮಹಿ ಅವರು ಸುಮಧುರ ಗಾಯನದ ಮೂಲಕ ಆಶ್ರಮದ ನಿವಾಸಿಗಳನ್ನು ರಂಜಿಸಿದರು. ಸಂಗೀತದ ಸೊಗಸಿಗೆ ಆಶ್ರಮದ ನಿವಾಸಿಗಳೂ ಹಾಡಿ-ಕುಣಿದು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ SUEZ Projects ಹಾಗೂ ಹಾರ್ಮೋನಿ ವೈಬ್ಸ್ ತಂಡ ಆಶ್ರಮದ ನಿವಾಸಿಗಳಿಗೆ ದಿನಸಿ ಸಾಮಗ್ರಿಗಳು, ಅಗತ್ಯ ವಸ್ತುಗಳು ಮತ್ತು ಆರ್ಥಿಕ ನೆರವು ವಿತರಿಸಿತು. ಈ ಸೇವಾ ಕಾರ್ಯವು ನಿವಾಸಿಗಳಲ್ಲಿ ಸಂತಸ ಮೂಡಿಸಿತು.
ಕಾರ್ಯಕ್ರಮದಲ್ಲಿ ಆಶ್ರಮದ ಆಡಳಿತಾಧಿಕಾರಿ ಸಿಸ್ಟರ್ ಐಲಿನ್ ಮಥಾಯಸ್ ಆಶ್ರಮದ ಇತಿಹಾಸ ಹಾಗೂ ಬೆಳವಣಿಗೆಯ ಕುರಿತು ಮಾಹಿತಿ ನೀಡಿದರು. ಆರಂಭದಲ್ಲಿ ಕುಷ್ಠರೋಗಿಗಳ ಆಶ್ರಯ ಕೇಂದ್ರವಾಗಿ ಆರಂಭಗೊಂಡ ಸಂಸ್ಥೆಯು ಇಂದು ವೃದ್ಧರು ಹಾಗೂ ದೈಹಿಕ ಮತ್ತು ಬೌದ್ಧಿಕ ಅಶಕ್ತತೆ ಹೊಂದಿರುವ ನಿರ್ಗತಿಕರಿಗೆ ಆಶ್ರಯ ನೀಡುತ್ತಿರುವುದಾಗಿ ವಿವರಿಸಿದರು.
SUEZ Projects ಪರವಾಗಿ ಸನೂಪ್, ಸಂದೇಶ್ ಆಳಪೆ, ಸೆಲ್ವನ್ ಹಾಗೂ ಸ್ವಾತಿ ಶರತ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ಆಶ್ರಮದ ನಿವಾಸಿಗಳು, ಅತಿಥಿಗಳು ಹಾಗೂ ಸ್ವಯಂಸೇವಕರಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಪರಿಸರ ಜಾಗೃತಿ, ಸಾಮಾಜಿಕ ಸೇವೆ ಮತ್ತು ಮಾನವೀಯ ಮೌಲ್ಯಗಳನ್ನು ಒಗ್ಗೂಡಿಸಿದ ಈ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.