ಪ್ರಿಯದರ್ಶಿನಿ ಯೋಜನೆ ಜಾರಿ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ

ಕಾಸರಗೋಡು, ಕೇರಳದ ಯುಡಿಎಫ್ ಸರ್ಕಾರದ ಮಹತ್ವಾಕಾಂಕ್ಷಿ ‘ಪ್ರಿಯದರ್ಶಿನಿ’ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯಕ್ಕೆ ಸೋಮವಾರ ಚಾಲನೆ ದೊರೆಯಿತು. ಉಪ್ಪಳ ಬಸ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಯೋಜನೆಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಜೆ. ಸೋಮಶೇಖರ ಸೇರಿದಂತೆ ಯುಡಿಎಫ್ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ರಾಜ್ಯಮಟ್ಟದ ಉದ್ಘಾಟನಾ ಕಾರ್ಯಕ್ರಮವು ತಿರುವನಂತಪುರದಲ್ಲಿ ನಡೆಯಿದ್ದು, ಮುಖ್ಯಮಂತ್ರಿ ವಿ.ಡಿ. ಸತೀಶನ್ ಮಹಿಳಾ ಪ್ರಯಾಣಿಕರೊಬ್ಬರಿಗೆ ‘ಶೂನ್ಯ ದರ’ದ ಟಿಕೆಟ್ ವಿತರಿಸುವ ಮೂಲಕ ಯೋಜನೆಗೆ ಅಧಿಕೃತ ಚಾಲನೆ ನೀಡಿದರು. ಸಾರಿಗೆ ಸಚಿವ ಸಿ.ಪಿ. ಜಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾಸರಗೋಡು ಜಿಲ್ಲೆಯ 114 ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಈ ಯೋಜನೆಯ ಪ್ರಯೋಜನ ಲಭ್ಯವಾಗಲಿದೆ. ಮೊದಲ ಹಂತದಲ್ಲಿ ಸಾಮಾನ್ಯ (ಆರ್ಡಿನರಿ), ಟೌನ್-ಟು-ಟೌನ್ ಹಾಗೂ ಲಿಮಿಟೆಡ್ ಸ್ಟಾಪ್ ಆರ್ಡಿನರಿ ಬಸ್‌ಗಳಲ್ಲಿ ಮಾತ್ರ ಉಚಿತ ಪ್ರಯಾಣ ಸೌಲಭ್ಯ ದೊರೆಯಲಿದೆ. ಫಾಸ್ಟ್ ಪ್ಯಾಸೆಂಜರ್, ಸೂಪರ್ ಫಾಸ್ಟ್ ಹಾಗೂ ಎಕ್ಸ್‌ಪ್ರೆಸ್ ಬಸ್‌ಗಳಿಗೆ ಸದ್ಯ ಈ ಯೋಜನೆ ಅನ್ವಯಿಸುವುದಿಲ್ಲ.

ಯೋಜನೆಯಡಿ ಮಹಿಳೆಯರು ಹಾಗೂ ಮಂಗಳಮುಖಿಯರಿಗೆ ಯಾವುದೇ ವಯೋಮಿತಿ ಅಥವಾ ಆದಾಯ ಮಿತಿ ವಿಧಿಸಲಾಗಿಲ್ಲ. ಉಚಿತ ಪ್ರಯಾಣಕ್ಕಾಗಿ ಸ್ಮಾರ್ಟ್ ಕಾರ್ಡ್ ಅಥವಾ ಗುರುತಿನ ಚೀಟಿ ತೋರಿಸುವ ಅಗತ್ಯವೂ ಇಲ್ಲ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಪ್ರಯಾಣಿಕರು ನಿರ್ವಾಹಕರಿಂದ ಕಡ್ಡಾಯವಾಗಿ ‘ಶೂನ್ಯ ದರ’ದ ಟಿಕೆಟ್ ಪಡೆಯಬೇಕು. ಸರ್ಕಾರದ ಆರ್ಥಿಕ ಹೊಣೆಗಾರಿಕೆಯನ್ನು ಲೆಕ್ಕಹಾಕುವ ಉದ್ದೇಶದಿಂದ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ.

ಕಾಸರಗೋಡು ಜಿಲ್ಲೆಯ ಮಹಿಳೆಯರಿಗೆ ವಿಶೇಷವಾಗಿ ಅಂತರರಾಜ್ಯ ಮಾರ್ಗಗಳಲ್ಲೂ ಈ ಯೋಜನೆಯ ಪ್ರಯೋಜನ ದೊರೆಯಲಿದೆ. ಕೇರಳ ಕೆಎಸ್‌ಆರ್‌ಟಿಸಿ ಸಾಮಾನ್ಯ ಬಸ್‌ಗಳಲ್ಲಿ ಕಾಸರಗೋಡಿನಿಂದ ಮಂಗಳೂರು, ಪುತ್ತೂರು ಹಾಗೂ ಸುಳ್ಯ ಭಾಗಗಳಿಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಶಿಕ್ಷಣ, ಉದ್ಯೋಗ ಹಾಗೂ ಚಿಕಿತ್ಸಾ ಉದ್ದೇಶಕ್ಕಾಗಿ ಪ್ರತಿದಿನ ಈ ಮಾರ್ಗಗಳಲ್ಲಿ ಸಂಚರಿಸುವ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಇದರಿಂದ ಆರ್ಥಿಕ ನೆರವು ದೊರೆಯಲಿದೆ.

ಯೋಜನೆ ಅನ್ವಯಿಸುವ ಬಸ್‌ಗಳಲ್ಲಿ ‘ಪ್ರಿಯದರ್ಶಿನಿ’ ಯೋಜನೆಯ ವಿಶೇಷ ಸ್ಟಿಕ್ಕರ್ ಅಳವಡಿಸಲಾಗಿದೆ.

ಇದಕ್ಕೆ ನಡುವೆ, ಫಾಸ್ಟ್ ಪ್ಯಾಸೆಂಜರ್ ಸೇರಿದಂತೆ ಎಲ್ಲಾ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಯೋಜನೆಯನ್ನು ವಿಸ್ತರಿಸದಿರುವುದನ್ನು ಖಂಡಿಸಿ ವಿರೋಧ ಪಕ್ಷಗಳು ಕಾರ್ಯಕ್ರಮವನ್ನು ಬಹಿಷ್ಕರಿಸಿವೆ. ಚುನಾವಣಾ ಪ್ರಚಾರದ ವೇಳೆ ನೀಡಿದ್ದ ಭರವಸೆಗಳನ್ನು ಸರ್ಕಾರ ಸಂಪೂರ್ಣವಾಗಿ ಈಡೇರಿಸಿಲ್ಲ ಎಂದು ಎಲ್‌ಡಿಎಫ್ ಹಾಗೂ ಬಿಜೆಪಿ ಆರೋಪಿಸಿವೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!