ಮಂಗಳೂರು, ಜೂ.16: ನ್ಯಾಯಾಲಯಗಳಲ್ಲಿ ಹೆಚ್ಚುತ್ತಿರುವ ಚೆಕ್ ಬೌನ್ಸ್ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ 2026ರ ಜುಲೈ 18 ಹಾಗೂ ನವೆಂಬರ್ 21ರಂದು ವಿಶೇಷ ಲೋಕ ಅದಾಲತ್ ಆಯೋಜಿಸಲಾಗುತ್ತಿದೆ ಎಂದು ಖಾಯಂ ಜನತಾ ನ್ಯಾಯಾಲಯದ ನ್ಯಾಯಾಧೀಶ ಜೈಶಂಕರ್ ತಿಳಿಸಿದ್ದಾರೆ.
ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಕುರಿತು ಪೊಲೀಸ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿ, ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಸಮನ್ಸ್ ಮತ್ತು ವಾರಂಟ್ ಜಾರಿಯಿಂದ ಪೊಲೀಸ್ ಇಲಾಖೆಯ ಮೇಲೂ ಹೆಚ್ಚಿನ ಒತ್ತಡ ಉಂಟಾಗುತ್ತಿದೆ ಎಂದು ಹೇಳಿದರು.
ದೂರುದಾರ ಮತ್ತು ಆರೋಪಿ ಪರಸ್ಪರ ರಾಜಿ ಮಾಡಿಕೊಂಡು ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದ್ದು, ಸಾರ್ವಜನಿಕರು ಸಂಬಂಧಿತ ತಾಲೂಕು ನ್ಯಾಯಾಲಯಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು. ಇದರಿಂದ ಪ್ರಕರಣಗಳ ಶೀಘ್ರ ವಿಲೇವಾರಿ ಸಾಧ್ಯವಾಗಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ಸಂಚಾರ ದಂಡಕ್ಕೆ ಶೇ.50 ರಿಯಾಯಿತಿ
ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸರ್ಕಾರ ನೀಡಿರುವ ಶೇ.50ರಷ್ಟು ದಂಡ ರಿಯಾಯಿತಿಯ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ.
1991ರಿಂದ 2022ರವರೆಗೆ ವಾಹನಗಳ ವಿರುದ್ಧ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಈ ರಿಯಾಯಿತಿ ಅನ್ವಯವಾಗಲಿದ್ದು, ದಂಡ ವಸೂಲಾತಿ ಸುಲಭವಾಗುವುದರ ಜೊತೆಗೆ ಪೊಲೀಸ್ ಹಾಗೂ ನ್ಯಾಯಾಲಯಗಳ ಮೇಲಿನ ಒತ್ತಡವೂ ಕಡಿಮೆಯಾಗಲಿದೆ ಎಂದು ತಿಳಿಸಿದರು.
ಲೋಕ ಅದಾಲತ್‌ಗೆ ಹೆಚ್ಚಿನ ಮಹತ್ವ
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನೀಸಾ ಮಾತನಾಡಿ, ಪ್ರತಿವರ್ಷ ನಾಲ್ಕು ರಾಷ್ಟ್ರೀಯ ಲೋಕ ಅದಾಲತ್‌ಗಳು ನಡೆಯುತ್ತವೆ ಹಾಗೂ ಎಲ್ಲಾ ನ್ಯಾಯಾಲಯಗಳಲ್ಲಿಯೂ ಲೋಕ ಅದಾಲತ್ ಪ್ರಕ್ರಿಯೆ ನಿರಂತರವಾಗಿ ಜಾರಿಯಲ್ಲಿರುತ್ತದೆ ಎಂದು ಹೇಳಿದರು.
ರಾಜಿಯಾಗಬಹುದಾದ ಬಾಕಿ ಪ್ರಕರಣಗಳು ಹಾಗೂ ನ್ಯಾಯಾಲಯದ ವ್ಯಾಪ್ತಿಗೆ ಬರುವ ವಿವಾದಗಳನ್ನು ಸಂಧಾನದ ಮೂಲಕ ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಬಹುದು ಎಂದು ಅವರು ತಿಳಿಸಿದರು.
ಸುಪ್ರೀಂ ಕೋರ್ಟ್‌ನಲ್ಲಿ ‘ಸಮಾಧಾನ ಸಮಾರೋಹ್-2026’
ಆಗಸ್ಟ್ 21, 22 ಮತ್ತು 23ರಂದು ಸುಪ್ರೀಂ ಕೋರ್ಟ್‌ನಲ್ಲಿ ‘ಸಮಾಧಾನ ಸಮಾರೋಹ್-2026’ ಹೆಸರಿನಲ್ಲಿ ವಿಶೇಷ ಲೋಕ ಅದಾಲತ್ ನಡೆಯಲಿದೆ. ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳ ಪಕ್ಷಕಾರರು ತಮ್ಮ ಸ್ಥಳದಿಂದಲೇ ರಾಜಿ ಸಂಧಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಸಭೆಯಲ್ಲಿ ಕಾರ್ಮಿಕ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ವೀರನಗೌಡ ಪಾಟೀಲ್, ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್, ಎಸಿಪಿ ಗೀತಾ ಕುಲಕರ್ಣಿ ಹಾಗೂ ವಿವಿಧ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.