ಮಂಗಳೂರು, ಜೂನ್ 19: ಹಂಪನಕಟ್ಟೆಯ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಕಾಲೇಜಿನ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.
ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಶಿಸ್ತು, ಸಾಮಾಜಿಕ ಜವಾಬ್ದಾರಿ ಹಾಗೂ ವ್ಯಕ್ತಿತ್ವ ವಿಕಸನವನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಬಳಿಕ ಮುಖ್ಯ ಅತಿಥಿಗಳು, ಸಂಚಾಲಕರು, ಪ್ರಾಂಶುಪಾಲರು ಹಾಗೂ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ವಿದ್ಯಾರ್ಥಿ ಪರಿಷತ್ತನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯೊಂದಿಗೆ ನಾಯಕತ್ವ ಗುಣಗಳನ್ನೂ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನೂತನ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಝೈನ್ ಶೇಖ್ ಜಾಕಿರ್, ಉಪಾಧ್ಯಕ್ಷೆ ಸಿಂಚನ ಹಾಗೂ ವಿವಿಧ ವಿಭಾಗಗಳ ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳಿಗೆ ಬ್ಯಾಡ್ಜ್ಗಳನ್ನು ವಿತರಿಸಲಾಯಿತು. ಬಳಿಕ ಕಾಲೇಜಿನ ಪ್ರಾಂಶುಪಾಲ ಮೆಲ್ವಿನ್ ವಾಸ್ ಅವರು ನೂತನ ಪದಾಧಿಕಾರಿಗಳಿಗೆ ಕರ್ತವ್ಯ ನಿರ್ವಹಣೆಯ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ಅತೀ ವಂದನೀಯ ಗುರು ಐವನ್ ಮೈಕಲ್ ರೊಡ್ರಿಗಸ್ ಮಾತನಾಡಿ, ವಿದ್ಯಾರ್ಥಿ ಜೀವನವು ಕೇವಲ ಪಠ್ಯಾಧ್ಯಯನಕ್ಕೆ ಸೀಮಿತವಾಗಿರದೆ, ಶಿಸ್ತು, ನಾಯಕತ್ವ, ಸಮಯಪ್ರಜ್ಞೆ ಹಾಗೂ ವ್ಯಕ್ತಿತ್ವ ವಿಕಸನವನ್ನು ರೂಢಿಸಿಕೊಳ್ಳುವ ಸುವರ್ಣಾವಕಾಶವಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕ್ಯಾಂಪಸ್ ನಿರ್ದೇಶಕ ಹಾಗೂ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಅತೀ ವಂದನೀಯ ಗುರು ಡಾ. ಆಲ್ವಿನ್ ಸೆರಾವೊ, ಮಿಲಾಗ್ರಿಸ್ ಸಿಬಿಎಸ್ಇ ಶಾಲೆಯ ಪ್ರಾಂಶುಪಾಲ ಅತೀ ವಂದನೀಯ ಗುರು ಉದಯ ಫೆರ್ನಾಂಡಿಸ್, ಮಿಲಾಗ್ರಿಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಡಿಕ್ಸನ್ ಡಿಸೋಜಾ ಹಾಗೂ ಕಾರ್ಯದರ್ಶಿ ಜಸಿಂತಾ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಶ್ರೀಮತಿ ಶೆರಿಲ್ ಪಿಂಟೊ ಸ್ವಾಗತಿಸಿದರು. ಶ್ರೀಮತಿ ಲಿಡ್ವಿನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಝೈನ್ ಶೇಖ್ ಜಾಕಿರ್ ವಂದನಾರ್ಪಣೆ ಸಲ್ಲಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾಲೇಜು ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.