ಮಂಗಳೂರು, ಜನತಾದಳ (ಜಾತ್ಯತೀತ) ಪಕ್ಷದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ (203)ದ ಸಂಘಟನಾ ಸಭೆಯು ಕ್ಷೇತ್ರಾಧ್ಯಕ್ಷ ಎನ್.ಪಿ. ಪುಷ್ಪರಾಜನ್ ಅವರ ಅಧ್ಯಕ್ಷತೆಯಲ್ಲಿ ನಗರದ ವುಡ್‌ಲ್ಯಾಂಡ್ಸ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು, ಸದಸ್ಯತ್ವ ಅಭಿಯಾನವನ್ನು ತೀವ್ರಗೊಳಿಸುವುದು, ಮುಂಬರುವ ರಾಜಕೀಯ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ರೂಪುರೇಷೆಗಳನ್ನು ಸಿದ್ಧಪಡಿಸುವುದು ಮತ್ತು ಜನಸಾಮಾನ್ಯರ ಸಮಸ್ಯೆಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಕ್ಷೇತ್ರ ಕಾರ್ಯಾಧ್ಯಕ್ಷ ವಸಂತ ಪೂಜಾರಿ, ಜೆಡಿಎಸ್ ಪಕ್ಷದ ತತ್ವ-ಸಿದ್ಧಾಂತಗಳು, ರೈತಪರ ಹಾಗೂ ಜನಪರ ಕಾರ್ಯಕ್ರಮಗಳನ್ನು ಮನೆಮನೆಗೆ ತಲುಪಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದು ಹೇಳಿದರು. ಯುವಕರು, ಮಹಿಳೆಯರು ಹಾಗೂ ವಿವಿಧ ಸಮುದಾಯದ ಜನರನ್ನು ಪಕ್ಷದತ್ತ ಸೆಳೆಯುವ ನಿಟ್ಟಿನಲ್ಲಿ ಸದಸ್ಯತ್ವ ಅಭಿಯಾನವನ್ನು ಮತ್ತಷ್ಟು ವ್ಯಾಪಕಗೊಳಿಸಬೇಕೆಂದು ಕರೆ ನೀಡಿದರು.
ಮಹಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ ಜಪ್ಪು ಮಾತನಾಡಿ, ಸಮಾಜಮುಖಿ ಚಿಂತನೆ ಹೊಂದಿರುವವರನ್ನು ಹಾಗೂ ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಮೂಲಕ ಸಂಘಟನೆಯನ್ನು ವಿಸ್ತರಿಸಬೇಕೆಂದರು. ಜೆಡಿಎಸ್ ಪಕ್ಷದ ತತ್ವಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಪಕ್ಷವನ್ನು ಜನಾಂದೋಲನವಾಗಿ ಬೆಳೆಸುವ ಸಂಕಲ್ಪದೊಂದಿಗೆ ಕಾರ್ಯಕರ್ತರು ಮುಂದುವರಿಯಬೇಕೆಂದು ಹೇಳಿದರು.
ಕಾರ್ಯಾಧ್ಯಕ್ಷ ಇಕ್ಬಾಲ್ ಮುಲ್ಕಿ ಸಾರ್ವಜನಿಕರಿಗೆ ಸಂಬಂಧಿಸಿದ ಪಡಿತರ ವಿತರಣೆಯಲ್ಲಿನ ಸಮಸ್ಯೆಗಳು, ಮೂಲಭೂತ ಸೌಕರ್ಯಗಳ ಕೊರತೆ ಸೇರಿದಂತೆ ವಿವಿಧ ನಾಗರಿಕ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿ, ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಜೆಡಿಎಸ್ ನಿರಂತರ ಹೋರಾಟ ನಡೆಸಬೇಕೆಂದು ಅಭಿಪ್ರಾಯಪಟ್ಟರು.
ಕಾರ್ಯಾಧ್ಯಕ್ಷ ಶಶಿರಾಜ್ ಶೆಟ್ಟಿ ಕೊಳಂಬೆ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಜನಪರ ಕಾರ್ಯಗಳು ಮತ್ತು ಸಾಧನೆಗಳನ್ನು ಜನಸಾಮಾನ್ಯರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಅಗತ್ಯವಿದೆ ಎಂದು ತಿಳಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಷಾ ಜಾಮೀರ್ ಮಾತನಾಡಿ, ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಸಂಘಟನೆಯ ಬೆಳವಣಿಗೆಯಲ್ಲಿ ಸಕ್ರಿಯ ಪಾತ್ರವಹಿಸಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಜೆಡಿಎಸ್ ಮೀನುಗಾರ ಘಟಕದ ರಾಜ್ಯಾಧ್ಯಕ್ಷ ರತ್ನಾಕರ್ ಸುವರ್ಣ, ಯುವ ಘಟಕದ ಜಿಲ್ಲಾ ಅಧ್ಯಕ್ಷ ಅಕ್ಷಿತ್ ಸುವರ್ಣ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ರಮೀಝಾ ನಾಸೀರ್ ಹಾಗೂ ಸುಮತಿ ಹೆಗ್ಡೆ ಉಪಸ್ಥಿತರಿದ್ದು ಸಂಘಟನೆಯ ವಿಸ್ತರಣೆ ಮತ್ತು ಪಕ್ಷದ ಮುಂದಿನ ಕಾರ್ಯಯೋಜನೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಹಲವರ ಪಕ್ಷ ಸೇರ್ಪಡೆ
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತತ್ವ-ಸಿದ್ಧಾಂತಗಳು ಹಾಗೂ ಜನಪರ ನಿಲುವುಗಳನ್ನು ಮೆಚ್ಚಿ ಸುಮತಿ ಹೆಗ್ಡೆ ಅವರ ನೇತೃತ್ವದಲ್ಲಿ ಜಯಲಕ್ಷ್ಮಿ ಶೆಟ್ಟಿ, ಸರೋಜಿನಿ ಶೆಟ್ಟಿ, ಕೀರ್ತಿ, ವಿಮಲ, ವೃಂದಾ ಎನ್. ಪ್ರಭು ಹಾಗೂ ತನುಜ ಕೃಷ್ಣ ಅವರು ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಪಕ್ಷದ ಮುಖಂಡರು ಶಾಲು ಹೊದಿಸಿ ನೂತನ ಸದಸ್ಯರನ್ನು ಬರಮಾಡಿಕೊಂಡರು.
ಹೊಸ ಸದಸ್ಯರ ಸೇರ್ಪಡೆಯಿಂದ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಗೆ ಮತ್ತಷ್ಟು ಬಲ ದೊರೆಯಲಿದೆ ಎಂದು ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾಜಿ ಕಾರ್ಪೊರೇಟರ್ ಅಜೀಜ್ ಕುದ್ರೋಳಿ, ಪ್ರಿಯಾ ಸಾಲಿಯಾನ್, ಭಾರತಿ ಪುಷ್ಪರಾಜನ್, ಚೂಡಾಮಣಿ ಶಾರದ ಶೆಟ್ಟಿ, ಜ್ಯೋತಿ ಜೈನ್, ವೀಣಾ ಶೆಟ್ಟಿ, ರತೀಶ್ ಕರ್ಕೇರ, ನಾಗೇಶ್ ಬಲ್ಮಠ, ಹಿತೇಶ್ ರೈ, ಪ್ರಶಾಂತ್ ಭಟ್ ಕಡಬ, ಮುನೀರ್ ಮುಕ್ಕಚೇರಿ, ಪ್ರಾನ್ಸಿಸ್ ಫೆರ್ನಾಂಡಿಸ್, ಕನಕದಾಸ್, ವಿನ್ಸೆಂಟ್, ಲತೀಫ್ ಬೆಂಗ್ರೆ, ಜಾವೀದ್ ಸೇರಿದಂತೆ ಕ್ಷೇತ್ರದ ಮುಖಂಡರು, ಪದಾಧಿಕಾರಿಗಳು, ಬೂತ್ ಮಟ್ಟದ ಕಾರ್ಯಕರ್ತರು ಹಾಗೂ ಸದಸ್ಯರು ಭಾಗವಹಿಸಿದ್ದರು.
ಸಭೆಯ ಅಂತ್ಯದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜನಪರ ರಾಜಕೀಯ ಶಕ್ತಿಯಾಗಿ ಬೆಳೆಸುವ ಸಂಕಲ್ಪವನ್ನು ಮುಖಂಡರು ಹಾಗೂ ಕಾರ್ಯಕರ್ತರು ವ್ಯಕ್ತಪಡಿಸಿದರು.