ಮಂಗಳೂರಿನಿಂದ ಬಂಟ್ವಾಳಕ್ಕೆ ಸೆನ್ ಠಾಣೆ ಸ್ಥಳಾಂತರ? ಕಟ್ಟಡ ಕಾಮಗಾರಿ ಬಹುತೇಕ ಪೂರ್ಣ

ಬಂಟ್ವಾಳ: ಡಿಜಿಟಲ್ ಯುಗದ ಜೀವನ ಶೈಲಿಯ ಪ್ರಸ್ತುತದ ದಿನಗಳಲ್ಲಿ ಅತೀ ಹೆಚ್ಚು ಅಪರಾಧಗಳು ನಡೆಯುವ ಸೈಬರ್ ಕ್ರೈಮ್ ಗಳ ಶೀಘ್ರ ಪತ್ತೆಗೆ ಅನುಕೂಲವಾಗುವಂತೆ ಬಂಟ್ವಾಳ ದಲ್ಲಿ ನಿರ್ಮಾಣವಾಗುತ್ತಿರುವ ಸೆನ್ ಪೋಲೀಸ್ ಠಾಣೆಯ ಕೆಲಸ ಕಾರ್ಯಗಳು ಬಹುತೇಕ ಪೂರ್ಣವಾಗಿದ್ದು ಇನ್ನೇನು ಉದ್ಘಾಟನೆ ಭಾಗ್ಯ ಕಾಣಬೇಕಾಗಿದೆ‌.


ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ದ.ಕ.ಜಿಲ್ಲಾ ಪೊಲೀಸ್ ವ್ಯಾಪ್ತಿಯ ಸೆನ್(ಸೈಬರ್, ಎಕನಾಮಿಕ್ ಆ್ಯಂಡ್ ನಾರ್ಕೋಟಿಕ್ಸ್) ಪೊಲೀಸ್ ಠಾಣೆಯನ್ನು ಬಂಟ್ವಾಳಕ್ಕೆ ಸ್ಥಳಾಂತರಿಸುವ ದೃಷ್ಟಿಯಿಂದ ಬಂಟ್ವಾಳ ನಗರ ಪೊಲೀಸ್ ಠಾಣೆಯ ಹಿಂಬದಿ ಇರುವ ಠಾಣೆಯ ಹಳೆಯ ಕಟ್ಟಡವನ್ನು ಮಂಗಳೂರು ನಿರ್ಮಿತಿ ಕೇಂದ್ರದ ಮೂಲಕ ನವೀಕರಿಸಿದ್ದು, ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಅಂಗಳಕ್ಕೆ ಇಂಟರ್ ಲಾಕ್ ಅಳವಡಿಕೆ ಕಾರ್ಯ ಮಾತ್ರ ಬಾಕಿಯಾಗಿದೆ. ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶೀಘ್ರವೇ ಸೆನ್ ಠಾಣೆ ಬಂಟ್ವಾಳಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ.
ಕಟ್ಟಡದ ಪೈಟಿಂಗ್ ಸಹಿತ ಬಹುತೇಕ ಎಲ್ಲಾ ಕೆಲಸಗಳು ಮುಗಿದಿದ್ದು ಹೊಸ ಠಾಣೆಯಂತೆ ಕಂಗೋಳಿಸುತ್ತಿದೆ.

ದ.ಕ.ಜಿಲ್ಲೆಯ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕು ವ್ಯಾಪ್ತಿ ಹಾಗೂ ಉಳ್ಳಾಲ ತಾಲೂಕಿನ ಕೆಲವು ಗ್ರಾಮಗಳು (ಬಂಟ್ವಾಳ ಗ್ರಾಮಾಂತರ ಠಾಣೆ) ದ.ಕ.ಜಿಲ್ಲಾ ಪೊಲೀಸ್ ವ್ಯಾಪ್ತಿಗೆ ಬರುತ್ತಿವೆ. ಈ ಭಾಗದ ಸಾಮಾನ್ಯ ಪ್ರಕರಣಗಳಿಗೆ ಆಯಾಯ ಭಾಗಗಳಲ್ಲೇ ಠಾಣೆಗಳಿವೆ. ಆದರೆ ಸೈಬರ್ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ಪ್ರಕರಣಗಳಿಗೆ ಸೆನ್ ಠಾಣೆಗೆ ದೂರು ನೀಡಬೇಕಿದ್ದು, ಪ್ರಸ್ತುತ ಅದು ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದೆ. ಮುಂದೆ ಅದು ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ನಗರ ಠಾಣೆಯ ಆವರಣಕ್ಕೆ ಆಗಮಿಸುವುದರಿಂದ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಜನತೆಗೆ ಅನುಕೂಲವಾಗಲಿದೆ.

ಇತ್ತೀಚೆಗೆ ಸೆನ್ ಠಾಣೆಯಲ್ಲಿ ಹೆಚ್ಚಿನ ದೂರು ಕೂಡ ದಾಖಲಾಗುತ್ತಿದೆ. ಆದರೆ, ಅಂತಹ ಪ್ರಕರಣಗಳಿಗೆ ದೂರು ನೀಡಲು ಮಂಗಳೂರಿಗೆ ಹೋಗಬೇಕು ಎನ್ನುವ ಕಾರಣಕ್ಕೆ ಒಂದಷ್ಟು ಮಂದಿ ದೂರು ನೀಡದೇ ಇರುತ್ತಿದ್ದು, ಮುಂದಿನ ದಿನಗಳಲ್ಲಿ ಠಾಣೆಯು ಬಂಟ್ವಾಳಕ್ಕೆ ಬರುತ್ತಿರುವುದರಿಂದ ಹೆಚ್ಚಿನಮಂದಿ ಪ್ರಕರಣ ದಾಖಲಿಸಲು ಹೆಚ್ಚಿನ ಆಸಕ್ತಿ ವಹಿಸುವ ಸಾಧ್ಯತೆ ಇದೆ.

ಬಂಟ್ವಾಳ ನಗರ ಪೊಲೀಸ್ ಠಾಣಾ ಕಟ್ಟಡದ ಹಿಂಬಂದಿ ನವೀಕರಣಗೊಳ್ಳುತ್ತಿರುವ ಸೆನ್ ಪೊಲೀಸ್ ಠಾಣಾ ಕಟ್ಟಡ, ಇದು ಹಳೆಯ ಕಾಲದ ಬಂಟ್ವಾಳ ನಗರ ಪೋಲೀಸ್ ಠಾಣೆಯ ಕಟ್ಟಡವಾಗಿದೆ ಮತ್ತು ಜೈಲು ಆಗಿತ್ತು.
ಹಳೆಯ ಜೈಲು ಪುರಾತನ ಶೈಲಿನ ನಿರ್ಮಾಣ ಹೊಂದಿದ್ದು, ಹಂಚಿನ ಮೇಲ್ಟಾವಣಿ ಹೊಂದಿದೆ. ಹಳೆಯ ಶೈಲಿನ ಕಟ್ಟಡವನ್ನು ಹಾಗೇ ಉಳಿಸುವ ದೃಷ್ಟಿಯಿಂದ ಮೇಲ್ಟಾವಣಿ ಹಾಗೂ ಇತರ ಭಾಗಗಳ ನವೀಕರಣ ನಡೆದಿದೆ. ಜತೆಗೆ ಅದರ ಮುಂಭಾಗದಲ್ಲಿ ಪಿಲ್ಲರ್‌ಗಳ ಮೂಲಕ ಆವರಣವನ್ನು ಈಗಾಗಲೇ ನಿರ್ಮಿಸಲಾಗಿದೆ. ಪ್ರಸ್ತುತ ಜೈಲಿನ ಕೊಠಡಿಯ ಕಂಬಿಗಳನ್ನು ತೆರವು ಮಾಡಿ ನವೀಕರಣಗೊಳಿಸಲಾಗಿದೆ.
ಇಲ್ಲಿ ಪ್ರತ್ಯೇಕ ಎರಡು ಜೈಲುಗಳು, ಡಿವೈಎಸ್ಪಿ, ಇನ್ಸ್‌ಪೆಕ್ಟರ್, ಪಿಎಸ್‌ಐ ಹಾಗೂ ಸಿಬಂದಿಗೆ ಪ್ರತ್ಯೇಕ ಕೊಠಡಿಗಳು, ಅಹವಾಲು ಸ್ವೀಕಾರದ ಕೊಠಡಿ, ಶೌಚಾಲಯಗಳು ನಿರ್ಮಾಣಗೊಂಡಿದೆ.

ಬಿ.ಸಿ. ರೋಡ್‌ ನಲ್ಲಿರುವ ಬ್ರಿಟಿಷರ ಕಾಲದಲ್ಲಿ ಜೈಲಾಗಿದ್ದ ಕಟ್ಟಡವನ್ನು ಸುಮಾರು 35 ಲಕ್ಷರೂ. ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದೆ.ಸುಮಾರು ಎರಡು ವರ್ಷಗಳ ಹಿಂದೆ ಸೆನ್ ಠಾಣೆಯ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಕಳೆದ ಡಿಸೆಂಬ‌ರ್ ನಲ್ಲಿ ಕಾಮಗಾರಿ ಆರಂಭಿಸಲಾಗಿತ್ತು.

ದ.ಕ.ಜಿಲ್ಲಾ ಪೊಲೀಸ್ ವ್ಯಾಪ್ತಿಯ ಸೆನ್ ಪೊಲೀಸ್ ಠಾಣೆಯಲ್ಲಿ ಒಬ್ಬರು ಡಿವೈಎಸ್‌ಪಿ, ಒಬ್ಬರು ಇನ್ಸ್‌ಪೆಕ್ಟರ್, ಪಿಎಸ್‌ಐ ಸೇರಿ 25 ಮಂದಿ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಠಾಣೆಗೆ ಡಿವೈಎಸ್‌ಪಿ ಇದ್ದು ಸದ್ಯ ಖಾಯಂ ಇನ್ಸ್‌ಪೆಕ್ಟರ್ ಇಲ್ಲವಾಗಿದೆ. ಹೀಗಾಗಿ ಬಂಟ್ವಾಳ ನಗರ ಇನ್ಸ್‌ಪೆಕ್ಟರ್ ಅನಂತಪದ್ಮನಾಭ ಅವರು ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.

ಸದ್ಯಕ್ಕಿಲ್ಲ: ಎಸ್.ಪಿ‌‌.ಅರುಣ್ ಕೆ.
ಕಾಮಗಾರಿ ಬಹುತೇಕ ಪೂರ್ಣಗೊಂಡರಿವುದು ನಿಜ,ಆದರೆ ಒಂದು ಹಂತದ ಕಾಮಗಾರಿ ಮಾತ್ರ ಮುಗಿದಿದ್ದು,ಇನ್ನೂ ಕೆಲವು ಕೆಲಸ ಕಾರ್ಯಗಳು ನಡೆಯಬೇಕಾಗಿರುವುದರಿಂದ, ಸದ್ಯ ಮಂಗಳೂರಿನಿಂದ ಸ್ಥಳಾಂತರ ಮಾಡುವ ಯೋಚನೆಯಿಲ್ಲ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅರುಣ್ ಕೆ ತಿಳಿಸಿದ್ದಾರೆ.

ಕೆಲಸ ಬಾಕಿನವೀನ್‌ಚಂದ್ರ ಎಂಜಿನಿಯರ್

ಹಳೆಯ ಕಟ್ಟಡವನ್ನು ನವೀಕರಣ ಮಾಡುವ ಕಾರ್ಯ ಮುಗಿದಿದೆಯಾದರೂ ಅಂಗಳಕ್ಕೆ ಇಂಟರ್ ಲಾಕ್ ಅಳವಡಿಕೆ ಸಹಿತ ಎರಡನೇ ಹಂತದ ಕಾಮಗಾರಿಗಳು ಇನ್ನು ನಡೆಯಬೇಕಾಗಿದೆ. ಮೊದಲ ಹಂತದ ಕಾಮಗಾರಿ ಮುಗಿದಿದ್ದು ಇಲಾಖೆಗೆ ಕಟ್ಟಡವನ್ನು ವಶಕ್ಕೆ ನೀಡಿದ್ದೇವೆ.ಆದರೆ ಕಾಮಗಾರಿ ಪೂರ್ಣಗೊಳ್ಳದೆ ಇರುವ ಕಾರಣಕ್ಕಾಗಿ ಸದ್ಯಕ್ಕೆ ಸ್ಥಳಾಂತರ ಮಾಡುವುದು ಕಷ್ಟ ಎಂದು ಇಂಜಿನಿಯರ್ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!