ಮಂಗಳೂರು:ಕರಾವಳಿಯ ಖ್ಯಾತ ಸಾಹಿತಿ, ವಿಮರ್ಶಕ ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರದ ವಿಶಿಷ್ಟ ವ್ಯಕ್ತಿತ್ವವಾದ ಮುದ್ದು ಮೂಡುಬೆಳ್ಳೆ ಅವರ ಜೀವನ, ಸಾಹಿತ್ಯ ಸಾಧನೆ ಹಾಗೂ ವ್ಯಕ್ತಿತ್ವವನ್ನು ದಾಖಲಿಸುವ ಡಾ. ಎಸ್.ಎನ್.ಡಿ. ಪೂಜಾರಿ ರಚಿಸಿರುವ ಇಂಗ್ಲಿಷ್ ಕೃತಿ ‘A Biographical Sketch of Muddu Moodubelle’ ಶುಕ್ರವಾರ ಮಂಗಳೂರಿನ ಪತ್ರಿಕಾಭವನದಲ್ಲಿ ಲೋಕಾರ್ಪಣೆಯಾಯಿತು.
ವಿಮರ್ಶಕರು, ತುಳು-ಕನ್ನಡ ವಿದ್ವಾಂಸರು ಹಾಗೂ ವಿಶ್ರಾಂತ ಕುಲಪತಿಗಳಾದ ಪ್ರೊ. ಬಿ.ಎ. ವಿವೇಕ ರೈ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಇದು ಅನುವಾದಿತ ಕೃತಿಯಲ್ಲ, ಡಾ. ಎಸ್.ಎನ್.ಡಿ. ಪೂಜಾರಿ ಅವರು ಇಂಗ್ಲಿಷ್ನಲ್ಲಿ ಸ್ವತಂತ್ರವಾಗಿ ರಚಿಸಿರುವ ಮೂಲ ಕೃತಿಯಾಗಿದೆ ಎಂದು ಹೇಳಿದರು.
ಸುಮಾರು 168 ಪುಟಗಳನ್ನು ಒಳಗೊಂಡಿರುವ ಈ ಕೃತಿಯಲ್ಲಿ ಮುದ್ದು ಮೂಡುಬೆಳ್ಳೆ ಅವರ ಜೀವನ ಪಯಣ, ಸಾಹಿತ್ಯ ಸಾಧನೆಗಳು ಹಾಗೂ ಅಪರೂಪದ ಛಾಯಾಚಿತ್ರಗಳನ್ನು ಅಚ್ಚುಕಟ್ಟಾಗಿ ದಾಖಲಿಸಲಾಗಿದೆ. ಒಬ್ಬ ವ್ಯಕ್ತಿಯ ಸಾಧನೆ ಹೇಗೆ ಒಂದು ಊರಿಗೆ ಖ್ಯಾತಿ ಹಾಗೂ ವಿಶಿಷ್ಟ ಗುರುತನ್ನು ತಂದುಕೊಡಬಲ್ಲದು ಎಂಬುದಕ್ಕೆ ಮುದ್ದು ಮೂಡುಬೆಳ್ಳೆ ಅವರೇ ಅತ್ಯುತ್ತಮ ಉದಾಹರಣೆ ಎಂದು ಅವರು ಅಭಿಪ್ರಾಯಪಟ್ಟರು.
“ಸಾಹಿತ್ಯ, ಕಲೆ, ಶಿಕ್ಷಣ ಅಥವಾ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳು ತಮ್ಮ ಊರಿನ ಹೆಸರನ್ನು ಜಗತ್ತಿಗೆ ಪರಿಚಯಿಸುತ್ತಾರೆ. ಮುದ್ದು ಮೂಡುಬೆಳ್ಳೆ ಅವರು ತಮ್ಮ ಸಾಹಿತ್ಯ ಸೇವೆಯ ಮೂಲಕ ‘ಮೂಡುಬೆಳ್ಳೆ’ ಎಂಬ ಹೆಸರನ್ನು ಕನ್ನಡಿಗರ ಮನೆಮಾತಾಗಿಸಿದ್ದಾರೆ,” ಎಂದು ಅವರು ಹೇಳಿದರು.
72ನೇ ವಯಸ್ಸಿನಲ್ಲಿಯೂ ಮುದ್ದು ಮೂಡುಬೆಳ್ಳೆ ಅವರು ಸಾಹಿತ್ಯ, ಸಂಸ್ಕೃತಿ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವುದು ಯುವ ಪೀಳಿಗೆಗೆ ಮಾದರಿಯಾಗಿದೆ. ವ್ಯಕ್ತಿಯ ಚೈತನ್ಯವು ವಯಸ್ಸಿನಿಂದಲ್ಲ, ಮನಸ್ಸು ಹಾಗೂ ನಿರಂತರ ಸೃಜನಶೀಲತೆಯಿಂದ ನಿರ್ಧಾರವಾಗುತ್ತದೆ ಎಂಬುದನ್ನು ಅವರ ಬದುಕು ಸಾಬೀತುಪಡಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೃತಿಯ ಕೇಂದ್ರ ವ್ಯಕ್ತಿತ್ವ ಮುದ್ದು ಮೂಡುಬೆಳ್ಳೆ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಡಾ. ಶ್ರೀನಾಥ್ ಎಂ.ಪಿ., ಆಕೃತಿ ಆಶಯ ಪಬ್ಲಿಕೇಶನ್ಸ್ನ ಕಲ್ಲೂರು ನಾಗೇಶ್ ಸೇರಿದಂತೆ ಹಲವಾರು ಸಾಹಿತ್ಯಾಸಕ್ತರು , ಪತ್ರಕರ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.