ಮಂಗಳೂರು: ತುಳುನಾಡಿನ ಅತ್ಯಂತ ವೈಭವಶಾಲಿ ಹಾಗೂ ಐತಿಹಾಸಿಕ ಧಾರ್ಮಿಕ ಉತ್ಸವಗಳಲ್ಲಿ ಒಂದಾದ ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಪೆರುಂ ಕಳಿಯಾಟ ಮಹೋತ್ಸವವು 75 ವರ್ಷಗಳ ಬಳಿಕ 2027ರ ಏಪ್ರಿಲ್ 9ರಿಂದ ಮೇ 4ರವರೆಗೆ ವೈಭವದಿಂದ ನಡೆಯಲಿದೆ.
ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಆಧ್ಯಾತ್ಮಿಕ ಪರಂಪರೆಯ ಪ್ರತೀಕವಾಗಿ ಗುರುತಿಸಿಕೊಂಡಿರುವ ಈ ಮಹೋತ್ಸವವು ಲಕ್ಷಾಂತರ ಭಕ್ತರು, ಕಲಾವಿದರು ಹಾಗೂ ಸಾರ್ವಜನಿಕರನ್ನು ಒಂದೆಡೆ ಸೇರಿಸುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವವಾಗಿದೆ. ಭಕ್ತಿ, ಆಚರಣೆ ಮತ್ತು ಜನಪದ ವೈಭವದ ಸಂಗಮವಾಗಿರುವ ಪೆರುಂ ಕಳಿಯಾಟವು ತುಳುನಾಡಿನ ಧಾರ್ಮಿಕ ಜೀವನದಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದೆ.
ಮಹೋತ್ಸವದ ಅಂಗವಾಗಿ ನಡಾವಳಿ ಉತ್ಸವ, ಭರಣಿ ಮಹೋತ್ಸವ ಹಾಗೂ ಪೆರುಂ ಕಳಿಯಾಟ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಈ ಬಾರಿಯ ಮಹೋತ್ಸವದ ವಿಶೇಷ ಆಕರ್ಷಣೆಯಾಗಿ 75 ವರ್ಷಗಳ ಬಳಿಕ ಕದ್ರಿ ಶ್ರೀ ಮಂಜುನಾಥ ದೇವರು ಹಾಗೂ ಕುದ್ರೋಳಿ ಭಗವತಿ ಮಾತೆಯರ ಐತಿಹಾಸಿಕ ಭೇಟಿ ಮತ್ತೆ ನಡೆಯಲಿರುವುದು ಭಕ್ತರಲ್ಲಿ ವಿಶೇಷ ಸಂಭ್ರಮ ಮೂಡಿಸಿದೆ.
75 ವರ್ಷಗಳ ಬಳಿಕ ತೆರೆದುಕೊಳ್ಳಲಿದೆ ಕದ್ರಿ ದೇವಸ್ಥಾನದ ತೆಂಕಣದ ದ್ವಾರ ….. !
1952ರಲ್ಲಿ ನಡೆದ ಪೆರುಂ ಕಳಿಯಾಟ ಮಹೋತ್ಸವದ ಸಂದರ್ಭದಲ್ಲಿ ಮಂಗಳೂರು ಸಾವಿರ ಸೀಮೆಯ ಒಡೆಯರಾದ ಕದ್ರಿ ಶ್ರೀ ಮಂಜುನಾಥ ದೇವರು ಮತ್ತು ಕುದ್ರೋಳಿ ಭಗವತಿ ಮಾತೆಯರ ಅಪೂರ್ವ ಭೇಟಿ ನಡೆದಿತ್ತು. ಇದೀಗ 75 ವರ್ಷಗಳ ಬಳಿಕ ಮತ್ತೊಮ್ಮೆ ಆ ಐತಿಹಾಸಿಕ ಕ್ಷಣ ಪುನರಾವರ್ತನೆಯಾಗಲಿದ್ದು, ಭಕ್ತರಿಗೆ ದಿವ್ಯ ದರ್ಶನದ ಸುವರ್ಣಾವಕಾಶ ದೊರೆಯಲಿದೆ.
ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ತೆಂಕಣ (ದಕ್ಷಿಣ) ದ್ವಾರವು ಕುದ್ರೋಳಿ ಭಗವತಿ ಮಾತೆಗೆ ಮೀಸಲಾಗಿದ್ದು, ಈ ದ್ವಾರವನ್ನು ಸಾಮಾನ್ಯ ಸಂದರ್ಭಗಳಲ್ಲಿ ತೆರೆಯುವುದಿಲ್ಲ. ಪೆರುಂ ಕಳಿಯಾಟ ಮಹೋತ್ಸವದ ಸಂದರ್ಭದಲ್ಲಿ ಭಗವತಿ ಮಾತೆಯ ಆಗಮನದ ವೇಳೆಯಲ್ಲಷ್ಟೇ ಈ ದ್ವಾರವನ್ನು ತೆರೆಯುವ ಸಂಪ್ರದಾಯವಿದೆ.
2027ರ ಮಹೋತ್ಸವದ ವೇಳೆ 75 ವರ್ಷಗಳ ಬಳಿಕ ಮತ್ತೆ ಕದ್ರಿ ದೇವಸ್ಥಾನದ ತೆಂಕಣದ ದ್ವಾರ ತೆರೆಯಲಿದ್ದು, ಕದ್ರಿ ಶ್ರೀ ಮಂಜುನಾಥ ದೇವರು ಹಾಗೂ ಕುದ್ರೋಳಿ ಭಗವತಿ ಮಾತೆಯರ ದಿವ್ಯ ಭೇಟಿಯನ್ನು ಕಣ್ತುಂಬಿಕೊಳ್ಳುವ ಅಪೂರ್ವ ಅವಕಾಶ ಭಕ್ತ ಸಮುದಾಯಕ್ಕೆ ಲಭಿಸಲಿದೆ.
ಈ ಐತಿಹಾಸಿಕ ಭೇಟಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಾಮರಸ್ಯದ ಪ್ರತೀಕವಾಗಿದ್ದು, ತುಳುನಾಡಿನ ಆಧ್ಯಾತ್ಮಿಕ ಪರಂಪರೆಯಲ್ಲಿ ವಿಶೇಷ ಮಹತ್ವ ಪಡೆದಿದೆ. ಮಹೋತ್ಸವದ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿದ್ದು, 2027ರ ಪೆರುಂ ಕಳಿಯಾಟವು ತುಳುನಾಡಿನ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯವಾಗಿ ದಾಖಲೆಯಾಗುವ ನಿರೀಕ್ಷೆಯಿದೆ.
ಗಿರೀಶ್ ಪಿ.ಎಂ. ಕಾಸರಗೋಡು