ಮಂಗಳೂರು, ಸಸ್ಯಗಳ ವೈವಿಧ್ಯತೆ, ಸಂರಕ್ಷಣೆ ಹಾಗೂ ಔಷಧೀಯ ಸಸ್ಯಶಾಸ್ತ್ರ ಕುರಿತ ಅಧ್ಯಯನ ಮತ್ತು ಸಂಶೋಧನೆಯನ್ನು ಉತ್ತೇಜಿಸುವ ಉದ್ದೇಶದಿಂದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು (ಪರಿಗಣಿತ ವಿಶ್ವವಿದ್ಯಾನಿಲಯ)ದ ಸಸ್ಯಶಾಸ್ತ್ರ ವಿಭಾಗ ಹಾಗೂ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಸಸ್ಯಕಾಶಿ ವಿಭಾಗದ ನಡುವೆ ಪರಸ್ಪರ ಸಹಕಾರ ಒಪ್ಪಂದ (ಎಂಒಯು)ಕ್ಕೆ ಸಹಿ ಹಾಕಲಾಯಿತು.
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎರಡೂ ಸಂಸ್ಥೆಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಒಪ್ಪಂದಕ್ಕೆ ಸಹಿ ಮಾಡಿಕೊಳ್ಳಲಾಯಿತು.
ಈ ಸಹಭಾಗಿತ್ವದ ಮೂಲಕ ಸಸ್ಯಶಾಸ್ತ್ರ ಕ್ಷೇತ್ರದಲ್ಲಿ ಸಂಶೋಧನೆ, ಜ್ಞಾನ ವಿನಿಮಯ, ಔಷಧೀಯ ಸಸ್ಯಗಳ ಅಧ್ಯಯನ, ತರಬೇತಿ ಕಾರ್ಯಕ್ರಮಗಳು ಹಾಗೂ ಸಂರಕ್ಷಣಾ ಚಟುವಟಿಕೆಗಳನ್ನು ಜಂಟಿಯಾಗಿ ಕೈಗೊಳ್ಳಲು ಉದ್ದೇಶಿಸಲಾಗಿದೆ.
ಕಾರ್ಯಕ್ರಮದಲ್ಲಿ ಸಂತ ಅಲೋಶಿಯಸ್ ಕಾಲೇಜಿನ (ಪರಿಗಣಿತ ವಿಶ್ವವಿದ್ಯಾನಿಲಯ) ಸಹ-ಕುಲಾಧಿಪತಿ ರೆ. ಫಾ. ಮೆಲ್ವಿನ್ ಡಿ ಕುನ್ಹಾ, ಸಹಭಾಗಿತ್ವ ಘಟಕದ ಅಧ್ಯಕ್ಷ ಡಾ. ರೋಶನ್, ಸಸ್ಯಶಾಸ್ತ್ರ ವಿಭಾಗದ ಡಾ. ಜ್ಯೋತಿ ಮಿರಾಂಡ, ಶಿಲ್ಪಾ, ಸನಾ ಶೇಕ್ ಹಾಗೂ ಅಕ್ಷತಾ ಆರ್. ಅಮೀನ್ ಉಪಸ್ಥಿತರಿದ್ದರು.
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಪರವಾಗಿ ಆಯುಕ್ತ ಶ್ರೀಕಾಂತ್ ರಾವ್, ಆಡಳಿತಾಧಿಕಾರಿ ಡಾ. ಅಶೋಕ್ ಕೆ.ಆರ್., ವೈಜ್ಞಾನಿಕ ಅಧಿಕಾರಿ ರಾಮಕೃಷ್ಣ ಮರಾಟಿ, ಕ್ಯುರೇಟರ್ ಜಗನ್ನಾಥ್ ಹಾಗೂ ಕಮ್ಯುನಿಟಿ ಮೊಬಿಲೈಸರ್ಗಳಾದ ಶಿವರಾಮ್, ಹೃತಿಕ್ ಮತ್ತು ವಿಕ್ಟರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.